Menu

ದೆಹಲಿ ಏಜೆನ್ಸಿಯಿಂದ ಸ್ಟಿಂಗ್‌ ಆಪರೇಷನ್‌: ಶಾಸಕ ಗಣಿಗ ರವಿ ಪೆನ್‌ಡ್ರೈವ್ ಪ್ರದರ್ಶನ!

ಉದಯಕಾಲ ನ್ಯೂಸ್, ಮಂಡ್ಯ: ರಾಜ್ಯ ಸರ್ಕಾರದ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸಿ ಸ್ಟಿಂಗ್ ಆಪರೇಷನ್ ನಡೆಸಲು ದೆಹಲಿ ಮೂಲದ ಏಜೆನ್ಸಿಯೊಂದಕ್ಕೆ ಸುಪಾರಿ ನೀಡಲಾಗಿದೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ಮುಂದೆ ಪೆನ್‌ಡ್ರೈವ್ ಪ್ರದರ್ಶಿಸಿ, ಇಡೀ ಕುತಂತ್ರದ ಸಿಸಿಟಿವಿ ವಿಡಿಯೋ ಹಾಗೂ ಆಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಸರ್ಕಾರಕ್ಕೆ ಮುಜುಗರ ತರಲು ಕೇಂದ್ರ ಸಚಿವರೊಬ್ಬರು ಹಾಗೂ ರಾಜ್ಯದ ಪ್ರಮುಖ ಬಿಜೆಪಿ ನಾಯಕರೊಬ್ಬರು ಸೇರಿ ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ಕೊಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಹಣವನ್ನೂ ನೀಡಲಾಗಿದೆ. ನಮ್ಮ ಸಚಿವರಿಗೆ ನಾನಾ ಆಮಿಷಗಳನ್ನು ಒಡ್ಡಲಾಯಿತಾದರೂ ಯಾರೂ ಇವರ ಬಲೆಗೆ ಬಿದ್ದಿಲ್ಲ, ನಮ್ಮ ಸಚಿವರು ಸಂಪೂರ್ಣ ಕ್ಲೀನ್ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶೀಘ್ರ ಸ್ಪಷ್ಟ ಸಾಕ್ಷ್ಯಗಳ ಬಹಿರಂಗ!
ಯಾವ ಏಜೆನ್ಸಿ ಭಾಗಿಯಾಗಿದೆ, ಯಾರೆಲ್ಲಾ ನಾಯಕರ ಪಿಎಗಳು ಸಂಪರ್ಕದಲ್ಲಿದ್ದರು, ಎಷ್ಟು ಹಣ ಕೈಬದಲಾಗಿದೆ ಎಂಬ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ. ಇದು ಕೇವಲ ಹಿಟ್ ಆ್ಯಂಡ್ ರನ್ ಹೇಳಿಕೆಯಲ್ಲ. ಈ ಎಲ್ಲಾ ಸಿಸಿಟಿವಿ, ಆಡಿಯೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಇನ್ನೊಂದು ವಾರದೊಳಗೆ ಅಧಿಕೃತವಾಗಿ ತನಿಖಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಹಾಗೂ ಮಾಧ್ಯಮಗಳ ಮುಂದೆಯೂ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದು ಎಐ (AI) ಯುಗ, ಯಾವುದನ್ನು ಬೇಕಾದರೂ ಸುಲಭವಾಗಿ ಸೃಷ್ಟಿ ಮಾಡಬಹುದು. ಇಂತಹ ಷಡ್ಯಂತ್ರಗಳ ಬಗ್ಗೆ ಖಚಿತ ಮಾಹಿತಿ ಮತ್ತು ದಾಖಲೆಗಳು ಇದ್ದ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು ಎಂದು ತಿಳಿಸಿದರು.

ವಿಪಕ್ಷಗಳ ವಿರುದ್ಧ ವಾಗ್ದಾಳಿ
ಈ ಹಿಂದೆ ಸಿಡಿ ಸೃಷ್ಟಿಸಲು ಬಂಡವಾಳ ಹೂಡಿದ್ದೇ ಬಿಜೆಪಿ. ಸರ್ಕಾರದ ಅಭಿವೃದ್ಧಿಯ ವೇಗ ಹಾಗೂ ಜನಪ್ರಿಯತೆಯನ್ನು ಸಹಿಸಲಾಗದೆ ವಿಪಕ್ಷಗಳು ಹತಾಶೆಯಿಂದ ಇಂತಹ ಷಡ್ಯಂತ್ರಗಳಿಗೆ ಕೈಹಾಕುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಶಾಸಕ ಗಣಿಗ ರವಿ ತೀವ್ರ ಆಕ್ರೋಶ ಹೊರಹಾಕಿದರು.
#GanigaRavi #Mandya #StingOperationSupari #CongressVsBJP #KarnatakaPolitics #UdayakalaNews #PenDriveControversy #DKShivakumar #HDKumaraswamy

Related Posts

Leave a Reply

Your email address will not be published. Required fields are marked *