Menu

ಏಷ್ಯನ್ ಗೇಮ್ಸ್ ಚಿನ್ನ ಪದಕ ವಿಜೇತರಿಗೆ 1 ಕೋಟಿ ಬಹುಮಾನ: ನೇರ ನೇಮಕಾತಿಯಲ್ಲಿ 2% ಮೀಸಲಾತಿ ಘೋಷಣೆ!

ಬೆಂಗಳೂರು: 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ್‌ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಕ್ರೀಡಾಪಟುಗಳ ಆರ್ಥಿಕ ಭದ್ರತೆ ಮತ್ತು ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರದಿಂದ ಹಲವು ಮಹತ್ವದ ತೀರ್ಮಾನಗಳನ್ನು ಪ್ರಕಟಿಸಲಾಯಿತು.

ನಗದು ಪುರಸ್ಕಾರ ಮೊತ್ತ ಭಾರೀ ಹೆಚ್ಚಳ

ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ಬಲ ತುಂಬುವ ಉದ್ದೇಶದಿಂದ, ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಬಹುಮಾನದ ಮೊತ್ತವನ್ನು ಸರ್ಕಾರ ಗಣನೀಯವಾಗಿ ಪರಿಷ್ಕರಿಸಿದೆ

ಚಿನ್ನದ ಪದಕ: 35 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಏರಿಕೆ
ಬೆಳ್ಳಿ ಪದಕ: 25 ಲಕ್ಷ ರೂ.ಗಳಿಂದ 75 ಲಕ್ಷ ರೂ.ಗೆ ಏರಿಕೆ
ಕಂಚಿನ ಪದಕ: 15 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಏರಿಕೆ

ಈ ಬಾರಿ ಒಟ್ಟು 8 ಮಂದಿ ಪದಕ ವಿಜೇತರಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಅಲ್ಲದೆ, ಅರ್ಹತೆ ಪಡೆದು ಸ್ಪರ್ಧಿಸಿದ್ದ ರಾಜ್ಯದ 20 ಕ್ರೀಡಾಪಟುಗಳಿಗೂ ತಲಾ 5 ಲಕ್ಷ ರೂ. ಪ್ರೋತ್ಸಾಹಧನವನ್ನು ಇದೇ ಮೊದಲ ಬಾರಿಗೆ ಮಂಜೂರು ಮಾಡಲಾಗಿದೆ.

ಸರ್ಕಾರಿ ಹುದ್ದೆಗಳಲ್ಲಿ ಶೇ. 2ರಷ್ಟು ಮೀಸಲಾತಿ ಹಾಗೂ ನೇರ ನೇಮಕಾತಿ
ಸಾಧಕ ಕ್ರೀಡಾಪಟುಗಳ ಭವಿಷ್ಯಕ್ಕೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇರಿಸಿದೆ. ರಾಜ್ಯ ಸರ್ಕಾರದ ಎಲ್ಲ ಹಂತದ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೇರ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸರ್ಕಾರದ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ನೀಡಲಾಗಿದ್ದು, ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಇದನ್ನು ನಿರ್ವಹಿಸಲಿದೆ.

ಒಲಿಂಪಿಕ್ಸ್ ಗುರಿಗಾಗಿ ವಿಶೇಷ ಯೋಜನೆ

ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನ್ನಡಿಗರ ಪ್ರಾಬಲ್ಯ ಮೆರೆಯಲು ಅನುಕೂಲವಾಗುವಂತೆ ಜಾರಿಗೊಳಿಸಿರುವ ಒಲಿಂಪಿಕ್ಸ್ ಯೋಜನೆಯಡಿ, ಪ್ರಸಕ್ತ ಸಾಲಿಗೆ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಶಿಲ್ಪಾ ಕೆ.ಎಸ್. ಸೇರಿದಂತೆ ಆಯ್ದ ನಾಲ್ವರು ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಇತರೆ ಸೌಲಭ್ಯಗಳಿಗಾಗಿ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ರೂಪುಗೊಳಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸಮಾರಂಭದಲ್ಲಿ ಪುನರುಚ್ಚರಿಸಲಾಯಿತು.
#AsianGames2026 #DKShivakumar #DrGParameshwara #KarnatakaSports #GoldMedal1Crore #SportsPolicy #MRPoovamma #ShreyankaPatil #UdayakalaNews #NewsUpdates

Related Posts

Leave a Reply

Your email address will not be published. Required fields are marked *