ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 24 ಹೋಟೆಲ್‌ಗಳು ಹಾಗೂ 2 ರೆಸ್ಟೋರೆಂಟ್‌ಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.ಪ್ರವಾಸಿಗರಿಗೆ ಕೇವಲ ವಸತಿ ಒದಗಿಸುವುದಕ್ಕೆ ಸೀಮಿತವಾಗದೆ, ಉತ್ತಮ ಕೊಠಡಿ, ಗುಣಮಟ್ಟದ ಆಹಾರ, ಸ್ವಚ್ಛತೆ, ವೃತ್ತಿಪರ ಆತಿಥ್ಯ, ಸುಗಮ ಕಾಯ್ದಿರಿಸುವಿಕೆ ಹಾಗೂ ಒಟ್ಟಾರೆ ಅತಿಥಿ ಅನುಭವವನ್ನು ಉತ್ತಮಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಖಾಸಗಿಯವರಿಗೆ ಸಿಗದ ಸ್ಥಳಗಳಲ್ಲಿ ಕೆಎಸ್‌ಟಿಡಿಸಿ ಆಸ್ತಿ
ಹಂಪಿ, ಜೋಗ್ ಫಾಲ್ಸ್, ನಂದಿ ಹಿಲ್ಸ್, ಮಡಿಕೇರಿ, ಕೆಆರ್‌ಎಸ್ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಅತ್ಯಂತ ಸಮೀಪದ ವಿಶಿಷ್ಟ ಸ್ಥಳಗಳಲ್ಲಿ ಕೆಎಸ್‌ಟಿಡಿಸಿಯ ‘ಮಯೂರ’ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಆತಿಥ್ಯ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗದಂತಹ ಪ್ರಮುಖ ಸ್ಥಳಗಳಲ್ಲಿ ಈ ಆಸ್ತಿಗಳು ಇರುವುದೇ ನಿಗಮದ ಪ್ರಮುಖ ಬಲವಾಗಿದೆ. ಈ ಸ್ಥಳದ ಅನುಕೂಲವನ್ನು ಉತ್ತಮ ಸೌಲಭ್ಯ ಮತ್ತು ವೃತ್ತಿಪರ ಸೇವೆಯೊಂದಿಗೆ ಜೋಡಿಸಿ ಪ್ರವಾಸಿಗರ ಅನುಭವ ಹಾಗೂ ನಿಗಮದ ಆದಾಯ ಎರಡನ್ನೂ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಕೋಣೆಯಿಂದ ಆತಿಥ್ಯ ಸೇವೆಯವರೆಗೆ…
100 ಕೋಟಿ ರೂ. ಮೇಲ್ದರ್ಜೆ ಯೋಜನೆಯಡಿ ಹೋಟೆಲ್ ಕೊಠಡಿಗಳು, ಸ್ನಾನಗೃಹಗಳು, ರೆಸ್ಟೋರೆಂಟ್‌ಗಳು, ಅಡುಗೆಮನೆಗಳು, ಸ್ವಾಗತ ಕೇಂದ್ರಗಳು, ಸಾಮಾನ್ಯ ಪ್ರದೇಶಗಳು, ಪೀಠೋಪಕರಣ, ಬೆಳಕಿನ ವ್ಯವಸ್ಥೆ ಹಾಗೂ ಉದ್ಯಾನವನಗಳನ್ನು ಹಂತ ಹಂತವಾಗಿ ಸುಧಾರಿಸಲಾಗುವುದು.
ಮೂಲಸೌಕರ್ಯದ ಜೊತೆಗೆ ಸ್ವಚ್ಛತೆ, ಆಹಾರದ ಗುಣಮಟ್ಟ, ಕೊಠಡಿ ನಿರ್ವಹಣೆ, ಸಿಬ್ಬಂದಿಯ ಆತಿಥ್ಯ ಕೌಶಲ್ಯ, ಆನ್‌ಲೈನ್ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಹಾಗೂ ಅತಿಥಿಗಳ ಪ್ರತಿಕ್ರಿಯೆ ವ್ಯವಸ್ಥೆಯನ್ನೂ ಬಲಪಡಿಸಲಾಗುವುದು. ಆಯಾ ಹೋಟೆಲ್‌ಗಳ ಸ್ಥಳ ಮತ್ತು ಬೇಡಿಕೆಯನ್ನು ಪರಿಗಣಿಸಿ 3-ಸ್ಟಾರ್ ಮಟ್ಟದ ಹಾಗೂ ಅದಕ್ಕಿಂತ ಉತ್ತಮ ಸೌಲಭ್ಯಗಳಿಗೆ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.ಸರ್ಕಾರಿ ಹೋಟೆಲ್ ಎಂದ ಮಾತ್ರಕ್ಕೆ ಪ್ರವಾಸಿಗರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ಸ್ಥಳ, ಸೌಲಭ್ಯ ಮತ್ತು ಸೇವೆ – ಈ ಮೂರರಲ್ಲೂ ಮಯೂರ ಹೋಟೆಲ್‌ಗಳು ಉತ್ತಮ ಮಾನದಂಡ ನಿರ್ಮಿಸಬೇಕು ಎಂದು ಕೆ.ಜೆ. ಜಾರ್ಜ್ ಸೂಚಿಸಿದರು.

ಆದ್ಯತೆಯ ಆಧಾರದಲ್ಲಿ ಯೋಜನೆ ಜಾರಿ – ಕೆಎಸ್‌ಟಿಡಿಸಿ ಅಧ್ಯಕ್ಷ
ಕೆಎಸ್‌ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್ ಮಾತನಾಡಿ, ಮಯೂರ ಹೋಟೆಲ್‌ಗಳಿಗೆ ವಿಶಿಷ್ಟ ಸ್ಥಳಗಳ ಬಲದ ಜೊತೆಗೆ ಜನರಿಗೆ ಪರಿಚಿತವಾದ ಹೆಸರೂ ಇದೆ. ಆಧುನಿಕ ಸೌಲಭ್ಯಗಳು ಮತ್ತು ಉತ್ತಮ ಸೇವೆಯೊಂದಿಗೆ ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಆದಾಯವನ್ನು ಗಣನೀಯವಾಗಿ ವೃದ್ಧಿಸಲು ಅವಕಾಶವಿದೆ. ಈ ಯೋಜನೆಯನ್ನು ಆದ್ಯತೆ ಆಧಾರದಲ್ಲಿ ಜಾರಿಗೊಳಿಸಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಇದನ್ನು ಕೇವಲ ಕಟ್ಟಡಗಳ ನವೀಕರಣವಾಗಿ ನೋಡದೆ ಪ್ರತಿ ಆಸ್ತಿಯ ಬಳಕೆ ಹಾಗೂ ಆದಾಯದ ಸಾಮರ್ಥ್ಯವನ್ನು ವಿಶ್ಲೇಷಿಸಿ, ಸಮಗ್ರ ಆತಿಥ್ಯ ಅನುಭವವನ್ನು ಉತ್ತಮಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
#KSTDC #KJGeorge #KarnatakaTourism #MayuraHotels #KarnatakaNews #TourismDevelopment #BengaluruNews #Udayakala


