ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳ ಮಾದರಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು,ವ್ಯಾಪಕ ಟೀಕಾಪ್ರಹಾರವೇ ಹರಿದುಬಂದಿತ್ತು. ಇದಕ್ಕೆ ಪೂರಕವಾಗಿ ನಗದು ಹೆಚ್ಚಳದ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆಯೆಂದು, ಕ್ರೀಡಾಪಟುಗಳಿಗೆ ಸಿಗಬೇಕಾದ ಬಹುಮಾನದ ಮೊತ್ತ ಎಷ್ಟು ಎಂಬುದನ್ನು ನಾಳೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿ ಪದಕ ತಂದ ಕನ್ನಡಿಗ ಕ್ರೀಡಾಪಟುಗಳಿಗೆ ಸರ್ಕಾರ ಸೂಕ್ತ ಗೌರವ ನೀಡಿಲ್ಲ ಎಂಬ ವಿರೋಧ ಪಕ್ಷಗಳ ಹಾಗೂ ಕ್ರೀಡಾಪಟುಗಳ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಅಥ್ಲೀಟ್ ಪೂವಮ್ಮ ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಲಾಗಿತ್ತು. ಆದರೆ ಆ ಸಮಯದಲ್ಲಿ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಕೂಡಲೇ ತಾವು ಸ್ವತಃ ಸಂಪರ್ಕಿಸಿ ಮಾತನಾಡಿದ್ದಾಗಿ ತಿಳಿಸಿದರು. ಕೇವಲ ಪೂವಮ್ಮ ಅಷ್ಟೇ ಅಲ್ಲದೆ, ಇತರೆ ಅಥ್ಲೀಟ್‌ಗಳೊಂದಿಗೂ ಚರ್ಚೆ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಬಹುಮಾನ ಮೊತ್ತ ಮರುಪರಿಶೀಲನೆ
“ಬೇರೆ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ನೀಡುತ್ತಿರುವ ನಗದು ಬಹುಮಾನದ ಮೊತ್ತ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ ಎಂದು ಕ್ರೀಡಾಪಟುಗಳು ಅಭಿಪ್ರಾಯಪಟ್ಟಿದ್ದಾರೆ. ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ತರಿಸಿಕೊಳ್ಳಲಾಗಿದೆ. ನಮ್ಮಲ್ಲೂ ಬಹುಮಾನದ ಮೊತ್ತವನ್ನು ಪುನರ್ ಪರಿಶೀಲನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ಅಂತಿಮವಾಗಿ ಎಷ್ಟು ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಣೆ ಮಾಡಲಾಗುತ್ತದೆ” ಎಂದು ಡಿಸಿಎಂ ತಿಳಿಸಿದರು.
ಕಂದಾಯ ಇಲಾಖೆ ಶುಲ್ಕ ಏರಿಕೆ ಸಮರ್ಥನೆ
ಇದೇ ವೇಳೆ ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕ ಏರಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ದಿನದಿಂದ ದಿನಕ್ಕೆ ಜೀವನ ವೆಚ್ಚ (ಕಾಸ್ಟ್ ಆಫ್ ಲಿವಿಂಗ್) ಹೆಚ್ಚಾಗುತ್ತಿದೆ. ಪ್ರತಿಯೊಂದು ವಸ್ತುವಿನ ಬೆಲೆಯೂ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುವುದು ಸಹಜವಾದ ಪ್ರಕ್ರಿಯೆ ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತನ್ನದೇ ಆದ ಆರ್ಥಿಕ ಸಂಪನ್ಮೂಲ ಹಾಗೂ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
#KarnatakaAthletes #CashPrize #GParmeshwara #AsianGames #Poovamma #KarnatakaGovernment #UdayakalaNews #RevenueDepartment #SportsIncentives #BangaloreNews


