Menu

ಬರದಿಂದ 46 ಸಾವಿರ ಕೋಟಿ ರೂ. ನಷ್ಟ, ಜಿಎಸ್‌ಟಿ ಸಂಗ್ರಹದಲ್ಲೂ ಕುಸಿತ – ಡಿಸಿಎಂ ಜಿ. ಪರಮೇಶ್ವರ್

ಬೆಂಗಳೂರು:ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ರಾಜ್ಯಕ್ಕೆ ಅಗತ್ಯವಿರುವ ಪರಿಹಾರ ಬಿಡುಗಡೆ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ಹಾಗೂ ಆರ್ಥಿಕ ನಷ್ಟದ ಕುರಿತು ವಿವರಣೆ ನೀಡಿದರು. ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ಪ್ರವಾಸದಲ್ಲಿದ್ದು, ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ. ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಲಾಗಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ತಂಡಕ್ಕೆ ವಾಸ್ತವ ಪರಿಸ್ಥಿತಿ ವಿವರಣೆ
ಮುಖ್ಯಮಂತ್ರಿಗಳು ಮತ್ತು ತಾವು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಸಮಗ್ರ ಮಾಹಿತಿ ನೀಡಿದ್ದೇವೆ. ಜತೆಗೆ, ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ ತಾಲೂಕುಗಳಿಗೂ ಭೇಟಿ ನೀಡುವಂತೆ ಮನವಿ ಮಾಡಿದ್ದೇವೆ. ಅದರಂತೆ ಅವರು ಕೃಷಿ ಜಮೀನುಗಳಿಗೆ ತೆರಳಿ, ರೈತರೊಂದಿಗೆ ನೇರವಾಗಿ ಮಾತನಾಡಿ ವಾಸ್ತವ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ ಎಂದು ಡಿಸಿಎಂ ತಿಳಿಸಿದರು

46 ಸಾವಿರ ಕೋಟಿಗೂ ಅಧಿಕ ಬೆಳೆ ನಷ್ಟ

ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು 46,324 ಕೋಟಿ ರೂ. ಗೂ ಅಧಿಕ ನಷ್ಟ ಸಂಭವಿಸಿದೆ. ಇದರಲ್ಲಿ ಸುಮಾರು 10,000 ದಿಂದ 11,000 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ತಂಡದ ವರದಿ ಸಲ್ಲಿಕೆಯಾದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜಿಎಸ್‌ಟಿ ಸಂಗ್ರಹದ ಮೇಲೂ ದುಷ್ಪರಿಣಾಮ

ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ನಿರಂತರವಾಗಿ ಎರಡನೇ ಸ್ಥಾನದಲ್ಲಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಭೀಕರ ಬರ ಎದುರಾಗಿರುವುದರಿಂದ ಬೆಳೆ ನಷ್ಟದ ಹೊಡೆತ ಪ್ರತಿಯೊಂದು ಕ್ಷೇತ್ರದ ಮೇಲೂ ಬೀಳಲಿದೆ. ಇದರ ಸ್ವಾಭಾವಿಕ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹಣಕಾಸು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಎದುರಿಸಲು ಅಗತ್ಯ ಬಫರ್ ಕಾಯ್ದುಕೊಳ್ಳಲಾಗಿದ್ದು, ಜಿಎಸ್‌‌ಟಿ ಹೆಚ್ಚಳಕ್ಕೆ ಪರ್ಯಾಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
#KarnatakaDrought #GParmeshwara #DroughtRelief #GSTCollection #CropLoss #UdayakalaNews #KarnatakaGovernment #DroughtInKarnataka #BangaloreNews

Related Posts

Leave a Reply

Your email address will not be published. Required fields are marked *