ನೀವೆಲ್ಲ ಗಲಾಟೆ ಮಾಡೋಕೆ ಬಂದಿದ್ದೀರಾ? ಶ್ರೇಯಸ್ ಪಟೇಲ್ ಬೆಂಬಲಿಗರ ಮೇಲೆ ಸಚಿವ ಶಿವಲಿಂಗೇಗೌಡ ಗರಂ
ಹಾಸನ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಂಸದ ಶ್ರೇಯಸ್ ಪಟೇಲ್ ಬೆಂಬಲಿಗರು ಹಾಗೂ ಸಚಿವ ಕೆ.ಎಂ. ಶಿವಲಿಂಗೇಗೌಡರ ನಡುವೆ ವಾಗ್ವಾದ ನಡೆದಿದ್ದು, ಗಲಾಟೆಯಿಂದಾಗಿ ಕೆಲಕಾಲ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದಲ್ಲಿ ಸಂಸದರ ಹೆಸರು ಪ್ರಸ್ತಾಪಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರ ಮೇಲೆ ಸಚಿವರು ಗರಂ ಆಗಿದ್ದಾರೆ.
ಕಾರ್ಯಕ್ರಮದಲ್ಲಿ ಜಟಾಪಟಿ ಹಾಗೂ ಆಕ್ರೋಶ
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷ ಜಿ.ಬಿ. ಶಶಿಧರ್ ಅವರ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರನ್ನು ಹೇಳದಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಸಂಸದರು ಕಾರ್ಯಕ್ರಮಕ್ಕೆ ಬರುವವರೆಗೂ ಉದ್ಘಾಟನೆ ಮಾಡದಂತೆ ಪಟ್ಟುಹಿಡಿದು ಕಾರ್ಯಕರ್ತರು ಗಲಾಟೆ ಹಾಗೂ ಅಡ್ಡಿಪಡಿಸಲು ಮುಂದಾದರು.
ಸಚಿವ ಶಿವಲಿಂಗೇಗೌಡರ ತರಾಟೆ
ಕಾರ್ಯಕರ್ತರ ಈ ವರ್ತನೆಯಿಂದ ಸಿಟ್ಟಿಗೆದ್ದ ಸಚಿವ ಕೆ.ಎಂ. ಶಿವಲಿಂಗೇಗೌಡರು ಗರಂ ಆಗಿ,”ನೀವೆಲ್ಲ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದೀರಾ? ನಾನು ಇಂತಹದ್ದನ್ನೆಲ್ಲಾ ತುಂಬಾ ನೋಡಿದ್ದೀನಿ, ಸುಮ್ಮನೆ ಕುಳಿತುಕೊಳ್ಳಿ” ಎಂದು ಗದರಿದರು. ಬಳಿಕ ಸಮಾಧಾನಪಡಿಸಲು ಯತ್ನಿಸುತ್ತಾ, “ನೀವೇ ಹೋಗಿ ಶ್ರೇಯಸ್ ಪಟೇಲ್ ಅವರನ್ನು ಕರೆದು ತನ್ನಿ, ಆಮೇಲೆ ಕಾರ್ಯಕ್ರಮ ಉದ್ಘಾಟನೆ ಮಾಡೋಣ” ಎಂದು ಹೇಳಿದರು.ನಂತರ ಕಾರ್ಯಕರ್ತರ ಅಸಮಾಧಾನದ ಮಧ್ಯೆಯೂ ಸಚಿವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಆದರೆ, ಉದ್ಘಾಟನೆಯ ಬಳಿಕವೂ ಕೆಲಕಾಲ ಗಲಾಟೆ ಹಾಗೂ ಮಾತಿನ ಚಕಮಕಿ ಮುಂದುವರಿದ ಕಾರಣ ಕಾರ್ಯಕ್ರಮವನ್ನು ಕೆಲಕಾಲ ಸ್ಥಗಿತಗೊಳಿಸಬೇಕಾಯಿತು.
#Hassan #ShivalingeGowda #ShreyasPatel #CongressParty #KarnatakaPolitics #UdayakalaNews #CongressRow #HassanNews


