Menu

ಏಷ್ಯನ್ ಗೇಮ್ಸ್ 2026: ಬಾಕ್ಸಿಂಗ್‌ನಲ್ಲಿ ಗೋಲ್ಡ್‌ – ಭಾರತಕ್ಕೆ 12ನೇ ಚಿನ್ನ ತಂದುಕೊಟ್ಟ ಲವ್ಲಿನಾ!

ಏಷ್ಯನ್ ಗೇಮ್ಸ್ 2026: ಬಾಕ್ಸಿಂಗ್‌ನಲ್ಲಿ ಗೋಲ್ಡ್‌ – ಭಾರತಕ್ಕೆ 12ನೇ ಚಿನ್ನ ತಂದುಕೊಟ್ಟ ಲವ್ಲಿನಾ!

ನಗೋಯಾ: ಜಪಾನ್‌ನ ಅಚಿ-ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಭಾರತದ ತಾರಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 12ನೇ ಚಿನ್ನದ ಪದಕ ಲಭಿಸಿದಂತಾಗಿದೆ.
ಚೀನಾ ಸ್ಪರ್ಧಿಗೆ ಪಂಚ್!
ಫೈನಲ್ ಸೆಣಸಾಟದಲ್ಲಿ ಚೀನಾದ ಪ್ರಬಲ ಸ್ಪರ್ಧಿ ಬಾಲ್ ಝಿಯಾ ಅವರನ್ನು ಎದುರಿಸಿದ ಲವ್ಲಿನಾ, ರೋಚಕ ಜಯ ಸಾಧಿಸಿದರು. ಆರಂಭಿಕ ರೌಂಡ್‌ನಲ್ಲಿ ಚೀನಾ ಆಟಗಾರ್ತಿ ಮುನ್ನಡೆ ಸಾಧಿಸಿ ಲವ್ಲಿನಾಗೆ ತೀವ್ರ ಪೈಪೋಟಿ ನೀಡಿದರೂ, ನಂತರ ಎಚ್ಚೆತ್ತುಕೊಂಡ ಲವ್ಲಿನಾ ಅದ್ಭುತವಾಗಿ ಪ್ರತಿದಾಳಿ ನಡೆಸಿದರು. ಅಂತಿಮವಾಗಿ ತಮ್ಮ ಪಂಚಿಂಗ್ ಸಾಮರ್ಥ್ಯ ಪ್ರದರ್ಶಿಸಿದ ಲವ್ಲಿನಾ 5-0 ಅಂತರದ ಏಕಪಕ್ಷೀಯ ತೀರ್ಪಿನೊಂದಿಗೆ ಗೆದ್ದು ಐತಿಹಾಸಿಕ ಚಿನ್ನದ ಪದಕಕ್ಕೆ ಭಾಜನರಾದರು.
ಆರ್ಚರಿಯಲ್ಲಿ ಐತಿಹಾಸಿಕ ಚಿನ್ನ
ಬಾಕ್ಸಿಂಗ್ ಚಿನ್ನಕ್ಕೂ ಮುನ್ನ ಮಹಿಳೆಯರ ರಿಕರ್ವ್ ಆರ್ಚರಿ ವಿಭಾಗದಲ್ಲೂ ಭಾರತೀಯ ತಂಡ ವಿಶ್ವ ದಾಖಲೆಯ ಸಾಧನೆ ಮಾಡಿದೆ. ಬಲಿಷ್ಠ ಹಾಗೂ 10 ಬಾರಿ ಚಾಂಪಿಯನ್ ಆಗಿದ್ದ ದಕ್ಷಿಣ ಕೊರಿಯಾ ತಂಡವನ್ನು 5-3 ಅಂತರದಿಂದ ಪರಾಭವಗೊಳಿಸಿದ ಭಾರತದ ವನಿತೆಯರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
70 ಪದಕಗಳ ಮೈಲಿಗಲ್ಲು
ಈ ಗೆಲುವುಗಳೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಚಿನ್ನ, 24 ಬೆಳ್ಳಿ ಹಾಗೂ 34 ಕಂಚಿನ ಪದಕಗಳು ಸೇರಿವೆ. ಭಾರತೀಯ ಕ್ರೀಡಾಪಟುಗಳು ಇನ್ನೂ ಹಲವು ಕ್ರೀಡೆಗಳಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.
ಹಾಕಿ, ಕ್ರಿಕೆಟ್‌ನಲ್ಲೂ ಗೋಲ್ಡ್ ನಿರೀಕ್ಷೆ: ಮಹಿಳಾ ಹಾಗೂ ಪುರುಷರ ಹಾಕಿ ಫೈನಲ್‌ ಪಂದ್ಯಗಳಲ್ಲಿ ಭಾರತೀಯ ತಂಡಗಳು ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದು, ಕ್ರಿಕೆಟ್‌ನಲ್ಲೂ ಭಾರತೀಯ ತಂಡಕ್ಕೆ ಚಿನ್ನದ ಪದಕ ದೊರೆಯುವ ದಟ್ಟ ನಿರೀಕ್ಷೆಯಿದೆ.

#Udayakala #UdayakalaNews #AsianGames2026 #Nagoya2026 #LovlinaBorgohain #BoxingGold #TeamIndia #AsianGames #IndianSports #GoldMedal #ArcheryGold #IndiaAtAsianGames #KannadaNews

Related Posts

Leave a Reply

Your email address will not be published. Required fields are marked *