ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ರುವಾರಿಗಳಾದ ಜ್ಞಾನೇಂದ್ರ, ಕನ್ನಾಳೆಯಿಂದ ಸ್ಥಳ ಮಹಜರು ಮಾಡಿಸಿದ ED
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಸವರಾಜ್ ಕನ್ನಾಳೆ ಮತ್ತು ಜ್ಞಾನೇಂದ್ರ ಕುಮಾರ್‌ನನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿ ಹಾಗೂ ಇತರ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಆರೋಪಿಗಳಾದ ಬಸವರಾಜ್ ಕನ್ನಾಳೆ ಮತ್ತು ಜ್ಞಾನೇಂದ್ರ ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇಡಿ ಅಧಿಕಾರಿಗಳು ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಗುರುವಾರ ಕೆಪಿಎಸ್‌ಸಿ ಕಚೇರಿ ಹಾಗೂ ಇತರ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಸ್ಥಳ ಮಹಜರಿನ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿದ್ದರು. ಜ್ಞಾನೇಂದ್ರ ಕುಮಾರ್ ಪರೀಕ್ಷೆ ನಡೆಯುವ ಒಂದು ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯನ್ನು ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ತಲುಪಿಸಿದ್ದರು.
ಬಳಿಕ ಕನ್ನಾಳೆ ನಗರದ ಹೊರ ವಲಯದಲ್ಲಿರುವ ರೆಸಾರ್ಟ್ ಹಾಗೂ ಇತರ ಸ್ಥಳಗಳಿಗೆ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದ. ಹೀಗಾಗಿ ಇ.ಡಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಇಡಲಾಗಿದ್ದ ಕೆಪಿಎಸ್‌ಸಿ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಂಗೆ ಹಾಗೂ ರೆಸಾರ್ಟ್‌ಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
#KPSC #KPSCScam #ED #EDRaid #VeterinaryOfficerScam #JnarendraKumar #BasavarajKannale #KarnatakaNews #BengaluruNews #KPSCNews #IAS #ScamAlert #KannadaNews


