Monday, September 28, 2026
Menu

ಫೇಸ್​ಬುಕ್ ಆ್ಯಡ್ ನಂಬಿ 1.9 ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ

ಫೇಸ್‌ಬುಕ್‌ ಜಾಹೀರಾತು ನಂಬಿ ಬೆಂಗಳೂರಿನ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ನಕಲಿ ವೆಬ್‌ಸೈಟ್‌ ಮೂಲಕ ಹಂತಹಂತವಾಗಿ 1.9 ರೂಪಾಯಿ ಹೂಡಿಕೆ ಮಾಡಿದ ಟೆಕ್ಕಿ ಹಣ ಹಿಂಪಡೆಯಲು ಯತ್ನಿಸಿದಾಗ ವಂಚಕರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಆನ್‌ಲೈನ್ ಟ್ರೇಡಿಂಗ್ ಜಾಹೀರಾತಿನ ಲಿಂಕ್ ಮೇಲೆ ಸಂತ್ರಸ್ತ ಟೆಕ್ಕಿ ಕ್ಲಿಕ್ ಮಾಡಿದ್ದರು. ತಕ್ಷಣವೇ ಸೈಬರ್ ವಂಚಕರು ಹೂಡಿಕೆ ಸಲಹೆಗಾರರು ಹಾಗೂ ಪ್ರತಿನಿಧಿಗಳ ಸೋಗಿನಲ್ಲಿ ಸಂತ್ರಸ್ತನನ್ನು ಸಂಪರ್ಕಿಸಿ Proxtrend ಎಂಬ ಹೂಡಿಕೆ ಪ್ಲಾಟ್‌ಫಾರ್ಮ್‌ಗೆ ಸೇರಲು ಉತ್ತೇಜಿಸಿದ್ದರು.

ವಂಚಕರ ಮಾತನ್ನು ನಂಬಿದ ವ್ಯಕ್ತಿ ನಕಲಿ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆದಿದ್ದರು. ಕೊಮೊರೊಸ್ ದ್ವೀಪದ ಮ್ವಾಲಿಯಲ್ಲಿ ನೋಂದಾಯಿತ ಸಂಸ್ಥೆ ಎಂದು ನಕಲಿ ಮಾಹಿತಿ ಕಾಣಿಸುತ್ತಿತ್ತು.  ಫೆಬ್ರವರಿ 27 ರಿಂದ ಸೆಪ್ಟೆಂಬರ್ 9 ರ ಅವಧಿಯಲ್ಲಿ ರಾಜಾ ಎಸ್., ವಿನಯ್ ಶರ್ಮಾ, ಜಾರ್ಜ್ ಟೈಸನ್ ಸೇರಿದಂತೆ ವಿವಿಧ ಹೆಸರುಗಳಲ್ಲಿ ಮಾತನಾಡಿದ ಅಕೌಂಟ್ ಮ್ಯಾನೇಜರ್‌ಗಳು ವ್ಯಕ್ತಿ‌ಗೆ ನಿರಂತರವಾಗಿ ಟ್ರೇಡಿಂಗ್ ಸಲಹೆ ನೀಡುತ್ತಾ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಆರಂಭದಲ್ಲಿ ಆ್ಯಪ್‌ನಲ್ಲಿ ಲಾಭ ಬಂದಂತೆ ನಕಲಿ ಬ್ಯಾಲೆನ್ಸ್ ತೋರಿಸಿ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 1.9 ಕೋಟಿ ರೂ. ಜಮೆ ಮಾಡಿಸಿಕೊಂಡಿದ್ದರು.

ಸಂತ್ರಸ್ತಹೂಡಿಕೆ ಮೊತ್ತವನ್ನು ಹಿಂಪಡೆಯಲು ಯತ್ನಿಸಿದಾಗ ವಂಚನೆ ಬಯಲಾಗಿದೆ. ಸಣ್ಣ ಮೊತ್ತವನ್ನು ಡ್ರಾ ಮಾಡಲು ಅವಕಾಶ ನೀಡಿದ್ದ ಕಂಪನಿ, ಸೆಪ್ಟೆಂಬರ್ 9 ರಂದು ಒಟ್ಟಾರೆ ಹಣ ಹಿಂಪಡೆಯಲು ಕೋರಿದಾಗ ತೆದಿದೆ. ಹಣ ಬಿಡುಗಡೆ ಮಾಡಬೇಕಾದರೆ ಪ್ರಕ್ರಿಯೆ ಸಂಕೀರ್ಣವಾಗಿದೆ ಎಂದು ಹೇಳಿ 50 ಲಕ್ಷ ರೂ. ಹಾಗೂ 20 ಲಕ್ಷ ರೂ. ಕಟ್ಟುವಂತೆ ಒತ್ತಾಯಿಸಲು ಆರಂಭಿಸಿದರು. ಮೋಸ ಹೋಗಿರುವುದನ್ನು ಮನಗಂಡ ಟೆಕ್ಕಿ ಸೈಬರ್ ಹೆಲ್ಪ್‌ಲೈನ್ 1930 ಗೆ ದೂರು ನೀಡಿದ್ದು, ಈಸ್ಟ್ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *