ಬರಗಾಲದ ಪರಿಸ್ಥಿತಿಯಲ್ಲಿ ನಾವು ರೈತರನ್ನು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನು ಮನ್ನಾ ಮಾಡಲಿ. ನಮ್ಮ ರಾಜ್ಯದ ಪಾಲನ್ನು ಭರಿಸಲು ಸಿದ್ಧರಿದ್ದೇವೆ” ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಬರದ ವಿಚಾರವಾಗಿ ನಡೆದ ವಿಶೇಷ ಚರ್ಚೆ ಬಳಿಕ ಸಿಎಂ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತುಗಳಿಗೆ ಉತ್ತರ ನೀಡಿದರು.
ರೈತರ ಸಾಲಮನ್ನಾ ಬಗ್ಗೆ ಸದನದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಬೆಂಬಲಿತ ಸರ್ಕಾರದಲ್ಲಿ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ದಾರೆ. 80 ಶಾಸಕರ ಸಂಖ್ಯಾಬಲವಿದ್ದ ನಾವು ಬೆಂಬಲ ನೀಡದೇ ಇದ್ದಿದ್ದರೆ 38 ಶಾಸಕರ ಬೆಂಬಲವಿದ್ದ ಕುಮಾರಸ್ವಾಮಿ ಸಾಲ ಮನ್ನಾ ಮಾಡಲು ಆಗುತ್ತಿತ್ತೇ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸಾಲ ಮನ್ನಾ ಮಾಡಿದರು. ನೀವೆಲ್ಲರೂ ಸರ್ವಪಕ್ಷ ನಿಯೋಗದಲ್ಲಿ ಬರುವುದಾಗಿ ತಿಳಿಸಿದ್ದೀರಿ. ಒಟ್ಟಾಗಿ ಹೋಗೋಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡೋಣ. ಕೇಂದ್ರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲಿ. ಬೇಕಿದ್ದರೆ ಎಲ್ಲಾ ಕಾರ್ಯಕ್ರಮ ನಿಲ್ಲಿಸಿ ರೈತರಿಗಾಗಿ ಈ ತೀರ್ಮಾನ ಮಾಡುತ್ತೇನೆ. 50:50, 60:40, 70:30 ಯಾವ ಸೂತ್ರಕ್ಕಾದರೂ ಸರಿ ನಮಗೆ ಕೇಂದ್ರ ಸರ್ಕಾರದಿಂದ ಏನಾದರೂ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕರಿಗೆ ಆಗ್ರಹಿಸಿದರು.
ಕಳೆದ ಬಾರಿ ನಾವು ಕೋರ್ಟ್ ಮೆಟ್ಟಿಲೇರಿ 3 ಸಾವಿರ ಕೋಟಿ ಪರಿಹಾರ ಪಡೆದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆದಿರುವುದು ಇತಿಹಾಸ. ಒಬ್ಬ ಸಂಸದ ಪ್ರಧಾನಮಂತ್ರಿಗಳ ಮುಂದೆ ಹೋಗಿ ಬಾಯಿ ಬಿಡಲಿಲ್ಲ. ಈಗ ವಿರೋಧ ಪಕ್ಷದ ನಾಯಕರು ಪ್ರಧಾನಮಂತ್ರಿಗಳ ಭೇಟಿಗೆ ಬರುತ್ತೇನೆ ಎಂದು ಹೇಳಿದ್ದು, ಅವರಿಗೆ ಅಭಿನಂದನೆ. ನಾನು ಪ್ರಧಾನಮಂತ್ರಿಗಳಿಗೆ ಸಮಯಾವಕಾಶ ಕೋರಿ ಪತ್ರ ಬರೆಯಲಿದ್ದೇನೆ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇನೆ ಎಂದು ಭರವಸೆ ನೀಡಿದರು.
ನಾವು ಯಾರಿಗೆಲ್ಲ ಕೆಲಸ ಮಾಡುತ್ತೇವೋ ಅವರೆಲ್ಲ ನಮಗೆ ಮತ ಹಾಕುವುದಿಲ್ಲ. 1.36 ಕೋಟಿ ಜನ ನಮಗೆ ಮತಹಾಕಿದ್ದಾರೆ, ನಾವು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.40 ಕೋಟಿ ಜನರಿಗೆ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಿದ್ದೇವೆ. ಮಂಗಳೂರು, ಉಡುಪಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ನಾವು ಈ ರಾಜ್ಯದ ಮಹಿಳೆಯರನ್ನು ನಮ್ಮ ತಾಯಂದಿರು ಎಂದು ಭಾವಿಸಿ ಎಲ್ಲರಿಗೂ ಯೋಜನೆ ನೀಡುತ್ತಿದ್ದೇವೆ. ಅಸ್ಸಾಂ ರಾಜ್ಯದಲ್ಲಿ ನೀವು ಆ ಪಕ್ಷಕ್ಕೆ ಮತ ಹಾಕಿದ್ದರೆ ಮಾತ್ರ ನಿಮಗೆ ಯೋಜನೆ. ನಾವು ಆ ರೀತಿ ಮಾಡುವುದಿಲ್ಲ. ಹೀಗಾಗಿ ಮತಕ್ಕೂ ಅಭಿವೃದ್ಧಿ ಕೆಲಸಕ್ಕೂ ವ್ಯತ್ಯಾಸವಿದೆ ಎಂದು ವಿವರಿಸಿದರು.
ರೈತರಿಗೆ ಕರೆಂಟ್ ಇಲ್ಲ ಎಂದು ಚರ್ಚೆ ಮಾಡಿದ್ದಾರೆ. ಕಲ್ಲಿದ್ದಲು ವಿದ್ಯುತ್ ಗೆ ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ನವೀಕರಿಸಬಹುದಾದ ಇಂಧನದತ್ತ ಗಮನಹರಿಸಿದೆ. ಪಾವಗಡದಲ್ಲಿ ಒಬ್ಬ ರೈತನ ಜಮೀನು ಖರೀದಿ ಮಾಡದೇ, ಸೋಲಾರ್ ಪವರ್ ಪ್ಲಾಂಟ್ ಮಾಡಿದೆ. ಅದನ್ನು ನೋಡಿ ಕೇಂದ್ರ ಸರ್ಕಾರ ಕುಸುಮ್ ಯೋಜನೆ ಜಾರಿಗೆ ತಂದಿದೆ. ಸಚಿವ ಜಾರ್ಜ್ ಅವ ಪ್ರತಿ ಯುನಿಟ್ ಗೆ 22 ರೂ. ನೀಡಿ ವಿದ್ಯುತ್ ಖರೀದಿಸುವ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ತಮಿಳುನಾಡು, 22, ಕೇರಳ 24 ರೂ.ಗೆ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ಪ್ರತಿ ವರ್ಷ ನಮ್ಮಲ್ಲಿ 10% ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಗಳು ಬರದ ಬಗ್ಗೆ ಮೂರು ತಿಂಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದು ಯಾಕೆ? ರೈತರು ಬಿತ್ತನೆ ಮಾಡಬೇಡಿ, ನಾವು ಹೇಳುವವರೆಗೆ ಕಾಯಿರಿ ಎಂದು ನಾನು ಮನವಿ ಮಾಡಿದೆ. ಕೆಲವರು ಟೀಕೆ ಮಾಡಿದರು. ಕೆಲವು ರೈತರು ಬಿತ್ತನೆ ಮಾಡಿದರು. ತುಂಗಭದ್ರಾ ಅಣೆಕಟ್ಟು ಗೇಟ್ ಉದ್ಘಾಟನೆ ಮಾಡುವಾಗ ತೆಲಂಗಾಣ, ಆಂಧ್ರಪ್ರದೇಶ ಕರ್ನಾಟಕದ ಮುಖ್ಯಮಂತ್ರಿಗಳು ಸೇರಿ ಸಮಾನಂತರ ಜಲಾಶಯ ನಿರ್ಮಾಣ, ಹೂಳು ತೆಗೆಯುವ ಬಗ್ಗೆ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬಂದವು. ನಾನು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಈ ತೀರ್ಮಾನ ಮಾಡಿದೆವು. ನಾನು ಈ ತೀರ್ಮಾನ ಮಾಡಿದ್ದು ನನ್ನ ರಿಯಲ್ ಎಸ್ಟೇಟ್ ವ್ಯವಹಾರಕ್ಕಾ ಎಂದು ತಿರುಗೇಟು ನೀಡಿದರು
ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಾನು ವಿಧಾನಸೌಧದ ನನ್ನ ಕಚೇರಿಯಲ್ಲಿ ಕೂತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅಧಿಕಾರಿಗಳ ಮೂಲಕ ತೀರ್ಮಾನ ಮಾಡಬಹುದಾಗಿತ್ತಲ್ಲವೇ, ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಇದನ್ನು ತಿರಸ್ಕರಿಸಿದ್ದಾರೆ. ನಾನು ಇದು ಏಕಾಂಗಿ ನಿರ್ಧಾರವಾಗಬಾರದು ಎಂದು ಶಾಸಕರು, ಜನರ ಅಭಿಪ್ರಾಯ ಸಂಗ್ರಹಿಸಿದೆ. ವಿರೋಧ ಪಕ್ಷಗಳ ನಾಯಕರೂ ಉತ್ತಮ ಸಲಹೆ ನೀಡಿದೆ. ನಾನು ಯಾರ ಜತೆ ಚರ್ಚೆ ಮಾಡಿದೆ ರೈತರೊಟ್ಟಿಗೆ. ಅರಣ್ಯಾಧಿಕಾರಿಗಳು ಆ ಭಾಗದ ರೈತರಿಗೆ ಕಿರುಕುಳ ನೀಡಬೇಡಿ ಎಂದು ಅಲ್ಲಿನ ಜನರ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬಿದೆ ಎಂದರು.
ನಿಮ್ಮ ಸರ್ಕಾರಗಳ ಇತಿಹಾಸ ಕೆದುಕುವುದಿಲ್ಲ
ನಾನು ಹೆಲಿಕಾಪ್ಟರ್ ನಲ್ಲಿ ಸಮೀಕ್ಷೆ ಮಾಡಿದವನಲ್ಲ. ನನಗೂ ಬುದ್ಧಿ ಇದೆ. ಯಡಿಯೂರಪ್ಪನವರಿದ್ದಾಗ ಏನೇನಾಯ್ತು ಎಂದು ಈಗ ಬಿಚ್ಚಿ ಹೇಳುವುದಿಲ್ಲ. ಪರಿಷತ್ತಿನಲ್ಲಿ ಸಾಲಮನ್ನಾ ವಿಚಾರ ಬಂದಾಗ ನಾನು ಪ್ರಿಂಟಿಗ್ ಮಷಿನ್ ಇಟ್ಟಿದ್ದೀನಾ ಎಂದು ಕೇಳಿದ್ದ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ. ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳುವೆ. 70-80 ಕ್ಷೇತ್ರದ ಶಾಸಕರು ತಮ್ಮ ಜನರ ಪರವಾಗಿ ಧ್ವನಿ ಎತ್ತಿ ಅವರ ವಿಚಾರ ಮಂಡಿಸಲು ಅವಕಾಶ ಮಾಡಿಕೊಟ್ಟಿರುವುದು ಈ ಸರ್ಕಾರದ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.
ನಾನು ನೀರಾವರಿ ಸಚಿವನಾಗಿದ್ದೆ. ನಮ್ಮ ಇಲಾಖೆಯಲ್ಲಿ 20 ಸಾವಿರ ಕೋಟಿ ಅನುದಾನ ಮಾತ್ರ ಇದೆ. ಆದರೆ ಕಾಮಗಾರಿ ಮಾತ್ರ 1.25 ಲಕ್ಷ ಕೋಟಿಯಷ್ಟು ನಡೆಯುತ್ತಿದೆ. ಈ ಮಧ್ಯೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕೆ 70 ಸಾವಿರ ಕೋಟಿ ಬೇಕಾಗಿದೆ. ಬಿಜೆಪಿ ಸರ್ಕಾರ ಎಷ್ಟು ಕೋಟಿ ಹಣದ ಯೋಜನೆ ಕೊಟ್ಟು ಹೋಗಿದೆ ಎಂದು ಪಟ್ಟಿ ಓದಲೇ ಎಂದು ಸವಾಲು ಹಾಕಿದರು.
ನಾನು ಚುನಾವಣೆಗೂ 6 ತಿಂಗಳು ಮುಂಚಿತವಾಗಿ ನಾನು ಈ ಟೆಂಡರ್ ಗಳನ್ನು ಕೈಗೆತ್ತಿಕೊಳ್ಳಬೇಡಿ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆಗಳನ್ನು ವಜಾಗೊಳಿಸಬಹುದಾಗಿತ್ತು. ಇರುವುದು 16 ಸಾವಿರ ಕೋಟಿ ಮಾತ್ರ. ಗುತ್ತಿಗೆದಾರರು ನಮ್ಮ ಶಾಸಕರ ಮೂಲಕ ಭಿಕ್ಷೆ ಬೇಡುವಂತೆ ಕೇಳುತ್ತಿದ್ದಾರೆ. ಆರ್ಥಿಕ ಇಲಾಖೆ ಸಲಹೆ ನೀಡವುದು ಅವರ ಕರ್ತವ್ಯ ಎಂದರು.
ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ರಾಜ್ಯದ ಬಜೆಟ್ 18 ಸಾವಿರ ಕೋಟಿ ಇತ್ತು, ಎಸ್ಎಂ ಕೃಷ್ಣ ಕಾಲದಲ್ಲಿ ಅದು 25 ಸಾವಿರ ಕೋಟಿಗೆ ಮುಟ್ಟಿತು. ನಂತರ ಹೆಚ್ಚಿನ ಆದಾಯ ಬಂದು ವರ್ಷಕ್ಕೆ ನಾಲ್ಕುವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದೇವೆ. ಕರ್ನಾಟಕ ಆರ್ಥಿಕ ಶಿಸ್ತಿನ ರಾಜ್ಯ. ನಾನು ಈಗಷ್ಟೇ ಹಣಕಾಸು ಸಚಿವನಾಗಿದ್ದೇನೆ. ನನಗೆ ಈ ವಿಚಾರದಲ್ಲಿ ಪರಿಣಿತಿ ಇದೆ ಎಂದು ಹೇಳುವುದಿಲ್ಲ. ನಮ್ಮ ಸುನೀಲ್ ಅವರು ಅದಾನಿ ಅವರನ್ನಾದರೂ ಕರೆಯಲಿ, ಬೇರೆಯವರನ್ನಾದರೂ ಕರೆಯಲಿ. ಅದಾನಿ ನಮ್ಮ ಮನೆಗೆ ಬಂದರೋ ಅಥವಾ ನಾನು ಅದಾನಿ ಅವರನ್ನು ಹುಡುಕಿಕೊಂಡು ಹೋಗಿದ್ದೀನಾ? ಅದಾನಿ ಜತೆ ನೀನು ಕೆಲಸ ಮಾಡಿದ್ದೆಯಲ್ಲಪ್ಪಾ. ನಿಮ್ಮ ಕಾಲಲ್ಲೇ ಅನೇಕ ಕಾಮಗಾರಿ ಮಾಡಿದ್ದೀರಿ. ನನಗೆ ಟೀಕೆ ಮಾಡಲು ಇಷ್ಟವಿಲ್ಲ. ಗುತ್ತಿಗೆದಾರರು, ಉದ್ಯಮಿಗಳು ಬರುತ್ತಾರೆ ಹೋಗುತ್ತಾರೆ. ನಮ್ಮ ಯೋಜನೆಗೆ ಜಾಗತಿಕ ಹೂಡಿಕೆದಾರರು ಬರಲಿ ಎಂದು ಅದಕ್ಕೆ ಪ್ರತ್ಯೇಕ ಇಲಾಖೆ ರಚಿಸಲಾಗುತ್ತಿದೆ ಎಂದು ಹೇಳಿದರು.
ಬಂಡವಾಳ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಕ್ಕೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ಆದಾಯವನ್ನು ಹಳ್ಳಿಗಳಿಗೆ ಬಳಸುತ್ತಿದ್ದೇವೆ. ರಾಜ್ಯದ ಬೇರೆ ಭಾಗಗಳಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿರುವುದು ಉದ್ಯೋಗ ಹಾಗೂ ಶಿಕ್ಷಣಕ್ಕೆ. ನಾನು ಬೆಂಗಳೂರು ನಗರಕ್ಕೆ ಬಂದಿದ್ದು ಶಿಕ್ಷಣಕ್ಕೆ. 20 ವರ್ಷಗಳಲ್ಲಿ 70 ಲಕ್ಷ ಜನಸಂಖ್ಯೆ ಹೆಚ್ಚಾಗಿದ್ದು, 45 ಲಕ್ಷ ಜನರು ಹೊರಗಿನಿಂದ ಬಂದು ಕೆಲಸ ಮಾಡುತ್ತಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರಿದ್ದಾರೆ. ಇಲ್ಲಿಂದ ಬರುತ್ತಿರುವ ಹಣ ಹೆಚ್ಚು ಹೋಗುತ್ತಿರುವುದು ಕೇಂದ್ರ ಸರ್ಕಾರಕ್ಕೆ. ಇಲ್ಲಿ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ. ರೈತರ ಟ್ರ್ಯಾಕ್ಟರ್ ಗೂ ಜಿಎಸ್ಟಿ ಎಂದು ಕುಟುಕಿದರು.


