Thursday, September 24, 2026
Menu

ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ 446 ಗ್ರಾಂ ಚಿನ್ನದ ಕಿರೀಟ ನಾಪತ್ತೆ

ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಸ್ಟ್ರಾಂಗ್‌ ರೂಂನಲ್ಲಿ ಇರಿಸಿದ್ದ 446 ಗ್ರಾಂ ತೂಕದ ಚಿನ್ನದ ಕಿರೀಟ ನಾಪತ್ತೆಯಾಗಿದೆ. ಚಿನ್ನದ ಕಿರೀಟದ ಬದಲಿಗೆ ನಕಲಿ ಕಿರೀಟವನ್ನು ಆ ಜಾಗದಲ್ಲಿ ಇರಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.

ಈ ಕಿರೀಟ ನಾಪತ್ತೆ ವಿಚಾರ ದೇವಾಲಯದ ಆಭರಣಗಳ ಎಣಿಕೆ ಮತ್ತು ಪರೀಕ್ಷೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಹೈಕೋರ್ಟ್ ಸೂಚನೆ ಪ್ರಕಾರ ನ್ಯಾಯಮೂರ್ತಿ ಕೆ.ಟಿ. ಶಂಕರನ್ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ. ಭದ್ರತಾ ವ್ಯವಸ್ಥೆ, ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಮತ್ತು ನೌಕರರ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ.

ನಾಪತ್ತೆಯಾಗಿರುವ ಚಿನ್ನದ ಕಿರೀಟವನ್ನು 2012ರಲ್ಲಿ ತಮಿಳುನಾಡಿನ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಅರ್ಪಿಸಿದ್ದರು. ಅದನ್ನು ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆ ಇಲ್ಲದ ಸ್ಥಳದಲ್ಲಿ ಇರಿಸಲಾಗಿತ್ತು. ತನಿಖೆಯಿಂದ ಸ್ಟ್ರಾಂಗ್ ರೂಮಿನಲ್ಲಿರುವ ಕಿರೀಟ ಅಸಲಿ ಅಲ್ಲ ಎಂದು ತಿಳಿದುಬಂದಿದೆ. ಅರನ್ಮುಲ ದೇವಸ್ವಂನ ಸ್ಟ್ರಾಂಗ್ ರೂಮ್‌ನಿಂದ ನಾಲ್ಕು ಗ್ರಾಂ ಚಿನ್ನದ ಹಾರವೂ ಕಾಣೆಯಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಭದ್ರತಾ ಲೋಪಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುವುದಾಗಿ ದೇವಸ್ವಂ ಮಂಡಳಿ ಹೇಳಿದೆ.

ಹೈಕೋರ್ಟ್ ನಿರ್ದೇಶನದನ್ವಯ ನ್ಯಾಯಮೂರ್ತಿ ಕೆ.ಟಿ. ಶಂಕರನ್ ನೇತೃತ್ವದ ಸಮಿತಿ ದೇವಾಲಯದ ತಿರುವಾಭರಣಗಳನ್ನು ಎಣಿಸಿ ಪರಿಶೀಲಿಸುತ್ತಿದೆ. ಮೊದಲ ಸುತ್ತಿನ ಎಣಿಕೆಯ ವರದಿಯನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಹೈಕೋರ್ಟ್ ವರದಿಯನ್ನು ಸ್ವೀಕರಿಸಿದ ನಂತರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವುದು ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಡಳಿ ಭರವಸೆ ನೀಡಿದೆ.

Related Posts

Leave a Reply

Your email address will not be published. Required fields are marked *