Thursday, September 17, 2026
Menu

ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್ ನಿಂದ: ಸಿಎಂ ಡಿಕೆ ಶಿವಕುಮಾರ್‌

ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್‌ನಿಂದ, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರು ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಆಗ ಕಾಂಗ್ರೆಸ್ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಬಂತು.  ಸರ್ದಾರ್ ವಲ್ಲಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು. ಧರಂಸಿಂಗ್ ಅವರ ವರದಿಯ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

371 ಜೆ ಶ್ರೀಮತಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ. 371 ಜೆ ಉದ್ದೇಶ ಒಂದು ಮನೆಯಲ್ಲಿ ಒಬ್ಬರಾದರೂ ಸರ್ಕಾರಿ ನೌಕರ ಇರಬೇಕು. ಊರಿಗೆ ಒಬ್ಬರಾದರೂ ಡಾಕ್ಟರ್ ಇರಬೇಕು. ಊರಿಗೆ ಐವರಾದರೂ ಎಂಜಿನಿಯರ್ ಗಳು ಇರಬೇಕು. ಇದೇ 371 ಜೆ ಸ್ಥಾನಮಾನದ ನಿಜವಾದ ಕನಸು. ಈ ಕನಸನ್ನು ನನಸು ಮಾಡಿರೋದು ಕಾಂಗ್ರೆಸ್ ಪಕ್ಷ  ಎಂದರು.

ಬಸವಣ್ಣನವರ ಹೋರಾಟದ ನೆಲ, ಸಮಾನತೆ, ಮಾನವೀಯತೆ, ಸಹಬಾಳ್ವೆಯ ಸಂದೇಶ ನೀಡಿದ ಪುಣ್ಯಭೂಮಿ ಈ ಕಲ್ಯಾಣ ಕರ್ನಾಟಕ.  ಬಸವಣ್ಣನವರು 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ನೆಲ ಕಲ್ಯಾಣ ಕರ್ನಾಟಕ.  ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಶ್ರೀ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮದಿಂದ ಕಲ್ಯಾಣ ಕರ್ನಾಟಕದ ಕಲ್ಯಾಣವಾಗುತ್ತಿದೆ ಎಂದು ಹೇಳಿದರು.

ಆಗ ಬಾ, ಈಗ ಬಾ, ಹೋಗಿ ಬಾ ಎನ್ನದೇ, ಈಗಲೇ ಕೊಡುವುದು ಮಾನವಧರ್ಮ ಸರ್ವಜ್ಞ.  ಸಂತ ಸೇವಾಲಾಲ್ ಹೇಳುತ್ತಾರೆ, ನೀರಿನಿಂದ ಸ್ನಾನ ಮಾಡಿದವನು ಬಟ್ಟೆ ಬದಲಿಸುತ್ತಾನೆ. ಬೆವರಿನಿಂದ ಸ್ನಾನ ಮಾಡಿದವನು ಇತಿಹಾಸ ನಿರ್ಮಿಸುತ್ತಾನೆ.  ಇಡುವ ಹೆಜ್ಜೆ ಚಿಕ್ಕದಿರಬಹುದು. ಆದರೆ ಆಲೋಚನೆ ದೊಡ್ಡದಿರಬೇಕು ಎಂದು ಸಿಎಂ ಹೇಳಿದರು.

ನಾವು ಮತಕ್ಕಾಗಿ, ಅಲ್ಲ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾ ಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ. ಸರಕಾರವನ್ನೇ ನಿಮ್ಮ ಮನೆಬಾಗಿಲಿಗೆ ತಂದು ನಿಮ್ಮ ಸಮಸ್ಯೆ ಪರಿಹರಿಸುತ್ತಿದ್ದೇವೆ. ಪ್ರತಿ 2 ನೇ ಹಾಗೂ 4 ನೇ ಶನಿವಾರ ನಾನೂ ಸೇರಿದಂತೆ ನಮ್ಮ ಮಂತ್ರಿಗಳು, ಶಾಸಕರು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ಮಾಡುತ್ತಿದ್ದೇವೆ. ಯುವಕರಲ್ಲಿ ನಾಯಕತ್ವ ಗುಣಗಳನ್ನು ರೂಪಿಸಲು, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಕ್ರೀಡೆ, ಕಲೆ, ಸಂಗೀತ ಕ್ಷೇತ್ರದಲ್ಲಿ ಅವರ ಪ್ರತಿಭೆ ಅರಳಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಕಲ್ಯಾಣ ನಮ್ಮ ಆದ್ಯತೆ. ಬೆಂಗಳೂರು ಕರ್ನಾಟಕದ ಕಿರೀಟ. ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ. ಕಲ್ಯಾಣ ಕರ್ನಾಟಕದಲ್ಲಿ ತುಂಗಭದ್ರಾ, ಕೃಷ್ಣೆಯಂತೆ ಅಭಿವೃದ್ದಿ ಕೂಡ ತುಂಬಿ ಹರಿಯುತ್ತಿದೆ. ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಆಣೆಕಟ್ಟೆಗೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ 12 ವರ್ಷದಲ್ಲಿ ಕಲ್ಯಾಣ ಕರ್ನಾಟಕಕ್ಕೆ 25 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷ ರಕ್ತ, ಬೆವರು ಹರಿಸಿದೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಆರ್ಟಿಕಲ್ 371 ಜೆ ಜಾರಿಯಾಗಿ 12 ವರ್ಷಗಳಾಗಿವೆ. 25 ಸಾವಿರ ಕೋಟಿ ಅನುದಾನದಲ್ಲಿ ಈಗಾಗಲೇ 14,000 ಕೋಟಿ ರೂ.‌ ಖರ್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.  ಈ ಭಾಗದ ಯುವಕರು 371 ಜೆ ಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 79,383 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈಗ 72 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಜನರಿಗೆ ದೊರೆಯಲಿವೆ. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ 5 ಸಾವಿರ ಕೋಟಿ ರೂ. ನೀಡಿದೆ ಎಂದು ಮಾಹಿತಿ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಅತೀ ದೊಡ್ಡ ESI ಆಸ್ಪತ್ರೆ ಕಟ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಯಾದಗಿರಿ, ಕೊಪ್ಪಳ ಮತ್ತು ಬೀದರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಇನ್ನಷ್ಟು ಜನರ ಸೇವೆಗೆ ಸಿದ್ದವಾಗುತ್ತಿವೆ. ಈ ಆಸ್ಪತ್ರೆಗಳಿಗೆ 423 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿ  ಮಾಡಿದ ಅಭಿವೃದ್ಧಿಯ ಕ್ರಾಂತಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದರು.

ಗುಲ್ಬರ್ಗ – ವಾಡಿ ಮತ್ತು ಬೀದರ್ – ಗುಲ್ಬರ್ಗ ಹೊಸ ರೈಲ್ವೆ ಮಾರ್ಗ ಮಾಡಿಸಿದವರು ಖರ್ಗೆಯವರು, ಈ ಭಾಗಕ್ಕೆ 27 ಹೊಸ ರೈಲು ಮಂಜೂರು ಮಾಡಿಸಿದ್ದಾರೆ. ಬಂಜಾರರನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಪಕ್ಷ.  ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಕಲ್ಯಾಣ ಕರ್ನಾಟಕ. ನಮ್ಮ ಕೈಹಿಡಿದ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *