ಚುನಾವಣೆ ಹತ್ತಿರ ಬರಲಿ ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಯಾವ ಅಧಿಕಾರವೂ ಇರೋದಿಲ್ಲ. ಬೇರೆಯವರು (ಕುಮಾರಸ್ವಾಮಿ)ಪ್ಯಾರಾಚೂಟ್ ಮೂಲಕ ಇಳಿಯುತ್ತಾರೆ ಎಂದು ಸಿಎಂ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಅಶೋಕ್, ವಿಜಯೇಂದ್ರ ಅವರ ಕತೆ ಏನಿದ್ದರೂ, ಬರೀ ಬುಟ್ಟಿ ಬೇವಿನ ಸೊಪ್ಪು, ನಂದೇ ಬೆಳಗು ಪೂಜಾರಿ ಅನ್ನೋ ತರಹ. ಕುಮಾರಸ್ವಾಮಿ ಇವರಿಬ್ಬರನ್ನು ಇಳಿಸಿ ನನಗೇನಾದರೂ ಸಿಗಬಹುದಾ ಅಂತಾ ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದೂ ಸಿಎಂ ಛೇಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಮಂತ್ರಿ ಸ್ಥಾನ ಸಿಕ್ಕಿದೆ. ಅದರ ಮೂಲಕ ಕರ್ನಾಟಕದ 50 ಸಾವಿರ ಜನರಿಗೆ ಉದ್ಯೋಗ ಸಿಗುವಂತೆ ಮಾಡಲಿ. ಅವರಿಗೆ ಎಲ್ಲಿ ಬೇಕೋ ಅಲ್ಲಿ, ಮಂಡ್ಯದಲ್ಲೇ ಬೇಕಾದರೂ ಭೂಸ್ವಾಧೀನ ಮಾಡಿ ಕೊಡೋಣ. ಆದರೆ ಅವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೆ? ದಿನವೂ ನಾವು ಟಿವಿಯಲ್ಲಿ ನೋಡುತ್ತಿದ್ದೇವಲ್ಲ ಎಂದಾಗ ಸಭಿಕರೊಬ್ಬರು “ಪೆನ್ ಡ್ರೈವ್” ಎಂದು ಕೂಗಿದರು. ಆಗ ಸಿಎಂ ಅವರು, ನಮಗೆ ಪೆನ್ ಡ್ರೈವ್ ವಿಚಾರ ಬೇಡ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಸೆಂಟ್ರಲ್ ಜೈಲ್ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ದಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂದು ಈಗ ಮಾತನಾಡುವುದು ಬೇಡ ಎಂದರು.
ನಮ್ಮನ್ನು ಏನು ಬೇಕಾದರೂ ಮಾಡಲಿ. ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ, ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ. ನೀವೆಲ್ಲವೂ ಟೀಮ್ ಅಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂದು ಆ ವಿಚಾರಗಳಿಗೆ ನಾನು ಹೋಗಿಲ್ಲ. ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಈ ಅಧಿಕಾರ ಸಕಾರಾತ್ಮಕವಾಗಿ ಉಪಯೋಗವಾಗಬೇಕು. ಈ ಅಧಿಕಾರ ಇರುವುದು ದುರುಪಯೋಗ ಮಾಡಲು ಅಲ್ಲ. ಹತ್ತು ಜನಕ್ಕೆ ಒಳ್ಳೆಯದನ್ನು ಮಾಡಲು ಎಂಬುದು ನನ್ನ ಬದ್ಧತೆ ಎಂದು ಹೇಳಿದರು.
10 ದಿನ ಸದನ ನಡೆಸಲೂ ಬಿಡಲಿಲ್ಲ. ಆನಂತರವೂ ಪಾದಯಾತ್ರೆ ಮಾಡಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರ ಮಾತನಾಡುವಂತಿಲ್ಲ. ಕೇವಲ ರೈತರ ವಿಚಾರ ಮಾತ್ರ. ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು? ಇದರ ಬಗ್ಗೆ ಚರ್ಚೆ ಮಾಡಲಿ, ಬಿಡಲಿ. ಅದು ಅವರಿಗೆ ಬಿಟ್ಟಿದ್ದು. ಆನಂತರ ಅವರು ಗದೆಯಾದರೂ ಬೀಸಲಿ, ಬಾಣವನ್ನಾದರೂ ಬಿಡಲಿ. ಇದನ್ನು ಅನುಭವಿಸಲು ನಮ್ಮ ಪಕ್ಷ, ನಾವು ಹಾಗೂ ಕಾರ್ಯಕರ್ತರು ಸಿದ್ಧರಿದ್ದೇವೆ ಎಂದರು.
ರಾಜಕೀಯ ಸಾಧ್ಯತೆಗಳ ಕಲೆ. ಜನರ ನಡುವೆ ಇದ್ದರೆ ಜನ ಜಾತಿ ಕೇಳಲ್ಲ. ನಾಯಕ ಕ್ರಿಯಾಶೀಲನಾಗಿದ್ದರೆ ಜನ ಗೆಲ್ಲಿಸುತ್ತಾರೆ. ಕೆಲವರು ಭಾವನೆಗಳ ಮೇಲೆ ಜಾತಿ ಮಾಡುತ್ತಾರೆ. ನನಗೆ ಜಾತಿಗಿಂತ ನೀತಿ, ಸಿದ್ಧಾಂತದ ಮೇಲೆ ನಂಬಿಕೆ. ಶ್ರಮ ಸಿದ್ಧಾಂತ, ಕಾಯಕದ ಮೇಲೆ ನಂಬಿಕೆ. ಶ್ರಮ ಇದ್ದ ಕಡೆ ಫಲವಿದೆ. ಒಂಟಿಯಾಗಿರುವ ನಾಯಕ ಎಂದಿಗೂ ಗೆಲುವು ಕಾಣುವುದಿಲ್ಲ. ಜನ ಜಾತಿ ನೋಡುವ ಹಾಗಿದ್ದರೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಹೇಗೆ ಸಾಧ್ಯ, ಸಿಂಧ್ಯಾ ಅವರು ನನ್ನ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿದ್ದರು. ಅಲ್ಲಿ ಮರಾಠಿ ಮತದಾರರ ಸಂಖ್ಯೆ 3 ಸಾವಿರರವೂ ದಾಟಿಲ್ಲ. ರಾಮನಗರದಲ್ಲಿ ನಿಖಿಲ್ ಎದುರು ಇಕ್ಬಾಲ್ ಹುಸೇನ್ ಗೆಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮಾಜಿ ಮೇಯರ್ ನಾಗರಾಜ್ ಅವರಿಗೆ, ಕೆ ಎಂ ನಾಗರಾಜ್ ಅವರಿಗೆ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಯಿತು. ಆಗ ನಾವು ನರೇಂದ್ರ ಬಾಬು ಹಾಗೂ ಚಂದ್ರಶೇಖರ್ ಅವರಿಗೆ ನೀಡೋಣ ಎಂದು ಎಸ್ ಎಂ ಕೃಷ್ಣ ಅವರಿಗೆ ಹೇಳಿದೆವು. ಆಗ ಅನೇಕರು ಎರಡೂ ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯವಿದೆ. ಅಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಗೆಲ್ಲಲು ಸಾಧ್ಯವೇ ಎಂದು ಕೇಳಿದರು. ಆದರೆ ಇವರಿಬ್ಬರೂ ಗೆದ್ದರು ಎಂದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದವು.. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹೀಗೆ ಎಲ್ಲಾ ಕಡೆ ಕರ್ನಾಟಕ ಮಾದರಿ ನಕಲು ಮಾಡಿದರು, ಈಗ ಅಮೆರಿಕದ ಟ್ರಂಪ್ ಕೂಡ ನಕಲು ಮಾಡುತ್ತಿದ್ದಾರೆ. ನನಗೆ ಮತ ಹಾಕಿ, ಇಂತಿಷ್ಟು ಡಾಲರ್ ಹಣ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಮ್ಮ ಆಲೋಚನೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ ಎಂದು ವಿವರಿಸಿದರು.
ಪ್ರತಿ ಪಂಚಾಯತಿಯಲ್ಲೂ 6 ಜನರಿಗೆ ಗ್ಯಾರಂಟಿ ಸಮಿತಿಯಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರಿಂದ 70 ಸಾವಿರ ಜನರಿಗೆ ಅಧಿಕಾರ ಸಿಗಲಿದೆ. ಇದರಿಂದ ನೀವುಗಳು ವಿಧಾನಸೌಧಕ್ಕೆ ಬರುವ ಅಧಿಕಾರ, ಜನರ ಸೇವೆ ಮಾಡಲು ಅವಕಾಶ ಸಿಗಲಿದೆ ಎಂದರು.
ದೇಶದ ಅಲ್ಪ ಸಂಖ್ಯಾತರನ್ನು ವೈರಿಗಳ ತರ ನೋಡಲಾಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ. ದೇಶದಿಂದ ಹೊರಗೆ ಹೋಗಿ ಎಂದು ಹೇಳಲು ಆಗುತ್ತದೆಯೇ? ಶೇ 13 ರಷ್ಟು ಅವರ ಜನಸಂಖ್ಯೆಯಿದೆ. ಯಾರೋ ಒಬ್ಬ ಪಂಕ್ಚರ್ ಹಾಕುವವರು ಎಂದು ಹೇಳಿದ. ಅವನ ಪಕ್ಷದವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಮಂತ್ರಿ ಮಾಡಲಿಲ್ಲ. ಆತ ಪಂಕ್ಚರ್ ಹಾಕದಿದ್ದರೆ ಅವನ ಗಾಡಿ ಓಡುತ್ತದೆಯೇ ಎಂದು ಸಿಎಂ ಕೇಳಿದರು.


