ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ ಮತ್ತು ಆರ್ಥಿಕ ಬಲ, ಬೆಂಗಳೂರು ಅಭಿವೃದ್ಧಿ, ಪ್ರದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ಆದ್ಯತೆ ನೀಡುವ ಧ್ಯೇಯದೊಂದಿಗೆ 100 ದಿನಗಳ ದೃಢ ಕರ್ನಾಟಕದ ಸಂಕಲ್ಪ ಸಮಾರಂಭವನ್ನು ಫಲಾನುಭವಿಗಳಿಂದಲೇ ಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು.
ಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಡಿಕೆ ಶಿವಕುಮಾರ್ ವೇದಿಕೆ ಏರುವ ಮುನ್ನ, ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿಗೆ ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು.
ಸಿಎಂ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ತೆರೆದಿದ್ದ ಅಕ್ಕಾ ಕೆಫೆ, ಅರಿವು ಕೇಂದ್ರಗಳಿಗೆ ಭೇಟಿ ಕೊಟ್ಟು ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿದರು. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರಾಜ್ಯದ ಎಲ್ಲಾ ಸಚಿವ ಸಂಪುಟ ಸಚಿವರು, ಶಾಸಕ ಮಿತ್ರರ ಬಳಿಗೆ ತಾವೇ ಖುದ್ದಾಗಿ ಹೋಗಿ ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡುವ ಮೂಲಕ ಸ್ವಾಗತ ಕೋರಿದರು.
ಕಾರ್ಯಕ್ರಮ ಉದ್ಘಾಟನೆ ವೇಳೆ ಗ್ಯಾರಂಟಿ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳು, ಪೌರಕಾರ್ಮಿಕರನ್ನು ವೇದಿಕೆಗೆ ಕರೆದು ಅವರೊಂದಿಗೆ ದೀಪಬೆಳಗಿಸಿದರು. ಗೃಹಲಕ್ಷ್ಮೀ ಹಣವನ್ನು ಬಳಸಿ ಸ್ವ ಉದ್ಯೋಗ ಆರಂಭಿಸಿದ ಮಹಿಳೆಯರು ತಾವು ತಯಾರಿಸಿದ್ದ ಖಾದ್ಯವನ್ನು ಸಮಾರಂಭಕ್ಕೆ ತೆಗೆದುಕೊಂಡು ಬಂದಿದ್ದರು. ಮುಖ್ಯಮಂತ್ರಿಗಳು, ಸಚಿವರು, ಶಾಸಕರೆಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ತಯಾರಿಸಿದ ಖಾದ್ಯವನ್ನು ಸವಿಯುವಂತೆ ಮನವಿ ಮಾಡಿದರು.
ಸರ್ಕಾರದ ನೂರುದಿನಗಳ ನೆನಪಿಗಾಗಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಷಮದಲ್ಲಿ ನೂತನ ಜನಪರ ಯೋಜನೆಗಳನ್ನು ಘೋಷಿಸಿ ಅಭಿವೃದ್ಧಿಯ ಮೈಲಿಗಲ್ಲು ನೆಟ್ಟರು. ಸೇವಾಒನ್, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ಶಾಲೆಗಳಿಗೆ ಸಿ ಎಸ್ ಆರ್ ಪೋರ್ಟಲ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿಎಂಟಿಸಿ 2.0 ಆ್ಯಪ್, ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ ಅವತಾರ್ 2.0, ಮಾಲಿನ್ಯ ನಿಯಂತ್ರಣ ಸಾಧನ (Retrofit emission Control Device RECD) ಅಳವಡಿಕೆ ಯೋಜನೆಗಳಿಗೆ ಸಿಎಂ ಚಾಲನೆ ನೀಡಿ ರಾಜ್ಯದ ಜನರಿಗೆ ಉಡುಗೊರೆ ನೀಡಿದರು.
ರಾಜ್ಯದಲ್ಲಿರುವ ಬಡವರು ಮುಖ್ಯವಾಗಿ ಗ್ರಾಮೀಣ ಭಾಗದ ನಿವೇಶನ ರಹಿತರಿಗಾಗಿ ಸೂರು ಒದಗಿಸಲು 5 ಲಕ್ಷ ನಿವೇಶನ ಹಂಚಿಕೆ ಯೋಜನೆ ಹಾಗೂ ಸೈನಿಕ ಸಮ್ಮಾನ ಯೋಜನೆ ಆದೇಶಕ್ಕೆ ಸಿಎಂ ಸಹಿ ಮಾಡಿದರು. ಸಮಾರಂಭ ಪೂರ್ಣಗೊಂಡ ನಂತರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಮುಖ್ಯಮಂತ್ರಿಗಳು ಬಾಳೆ ಎಲೆ ಭೋಜನ ಸೇವಿಸಿದರು. ಪಕ್ಕದಲ್ಲಿ ಕುಳಿತ ರೈತನೊಂದಿಗೆ, ‘ಯಾವೂರು, ಏನು ಬೇಳೆ ಹಾಕಿದೆಯಾ, ಮಳೆ ಏನಾದ್ರು ಬಿತ್ತಾ, ಏನು ಭಯ ಬೀಳಬೇಡ, ನಮ್ಮ ಸರ್ಕಾರ ಇದೆ ಎಂದು ಅಭಯ ತುಂಬಿದರು.


