Friday, September 11, 2026
Menu

ಸರ್ಕಾರ ಜನರಿಗೆ ಉತ್ತರದಾಯಿ, ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆ ಈಡೇರಿಸಿ: ಮಾಜಿ ಸಿಎಂ ಸಿದ್ದರಾಮಯ್ಯ

ಯಾವುದೇ ಸರ್ಕಾರ ಜನರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯ. ಡಿಕೆ ಶಿವಕುಮಾರ್‌  ನೇತೃತ್ವದ ಸರ್ಕಾರವು  100 ದಿನಗಳನ್ನು ಪೂರೈಸಿದೆ. ಅದರ ಜ್ಞಾಪಕಾರ್ಥವಾಗಿ ಸರ್ಕಾರ ಈ ಆಚರಣೆಯನ್ನು ಮಾಡುತ್ತಿದೆ. 100 ದಿನಗಳು, ಇದೊಂದು ಸಂಭ್ರಮಾಚರಣೆಯಲ್ಲ,  ಈ 100 ದಿನಗಳಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೋ ಇಲ್ಲವೋ ಎಂಬುದನ್ನು ಜನರ ಮುಂದಿಡುವಂತಹ ಒಂದು ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ  ಆಯೋಜಿಸಿದ್ದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಜನರು ಇಲ್ಲಿ ಮಾಲೀಕರು, ನಾವು ಜನರಿಗೆ ಏನು ವಾಗ್ದಾನಗಳನ್ನು ಕೊಟ್ಟಿದ್ದೇವೆ, ಆ ವಾಗ್ದಾನಗಳನ್ನು ಜಾರಿ ಮಾಡುತ್ತಿದ್ದೇವೆಯೋ? ಇಲ್ಲವೋ? ಎನ್ನುವುದು ಅದು ಬಹಳ ಮುಖ್ಯ. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಸಮ ಸಮಾಜವನ್ನು ನಿರ್ಮಾಣ ಮಾಡಬೇಕು. ನಾವು ಸಮ ಸಮಾಜ ನಿರ್ಮಾಣ ಮಾಡದೆ ಹೋದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂಬ ಭಾವನೆಯನ್ನು ವ್ಯಕ್ತವಾಗುತ್ತದೆ ಎಂದರು.

ಯಾವುದೇ ಸರ್ಕಾರ ಜನರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯ. ನಾನು ಮುಖ್ಯಮಂತ್ರಿಯಾಗಿ, ಡಿಕೆ  ಶಿವಕುಮಾರ್‌  ಉಪಮುಖ್ಯಮಂತ್ರಿಯಾಗಿ 3 ವರ್ಷಕ್ಕೂ ಹೆಚ್ಚು ಕಾಲ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೆವು. ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಪ್ರತಿವರ್ಷ  52 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಅಷ್ಟೊಂದು ಹಣವನ್ನು ಭರಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. 52 ಸಾವಿರ ಕೋಟಿ ರೂ. ರ್ಕಾರವೇ ಭರಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ತಲುಪಿಸುವಂತ ಕೆಲಸವನ್ನು ಮಾಡಿತ್ತು ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಬಜೆಟ್‌ ಅನ್ನು ರೂಪಿಸುತ್ತದೆ. ಉಳಿದ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನು ಹೊರಡಿಸುತ್ತವೆ. ಆದರೆ ಅವುಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ಟೀಕಿಸಿದರು. ಪ್ರಣಾಳಿಕೆಯಲ್ಲಿ ಇರುವ ಭರವಸೆಗಳನ್ನು ಒಂದೇ ವರ್ಷದಲ್ಲಿ ಜಾರಿ ಮಾಡಬೇಕು ಎಂದೇನಿಲ್ಲ. 5 ವರ್ಷಗಳು ಅವಕಾಶವಿದೆ. ಆ 5 ವರ್ಷಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುವಂತಹ ಕೆಲಸವನ್ನು ಮಾಡಬೇಕು. ಉದಾಹರಣೆಗೆ 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ, ಪ್ರಣಾಳಿಕೆಯ ಮೂಲಕ ಜನರಿಗೆ 165 ವಾಗ್ದಾನಗಳನ್ನು ಕೊಟ್ಟಿದ್ದೇವು. ಅವುಗಳ ಪೈಕಿ 158ಕ್ಕೂ ಹೆಚ್ಚು ವಾಗ್ದಾನಗಳನ್ನು ಜಾರಿ ಮಾಡಿದ್ದೇವೆ. ಯಾವುದಾದರೂ ಪಕ್ಷ ಅಥವಾ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ. ಬಿಜೆಪಿಯವರು, ಜೆಡಿಎಸ್‌ನವರು ಸೇರಿದಂತೆ ಬೇರೆ ಯಾವ ಪಕ್ಷದವರೂ ಕೂಡ ಇದನ್ನು ಮಾಡಿಲ್ಲ ಎಂದು ನುಡಿದರು.

ಎಲ್ಲ ಜನರಿಗೆ ಕೂಡ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಶಕ್ತಿಯನ್ನು ತುಂಬಬೇಕು. ಬಹುಶಃ ಕಾಂಗ್ರೆಸ್‌ ಪಕ್ಷದ ಧ್ಯೇಯ, ಸಿದ್ಧಾಂತ ಕಟ್ಟಕಡೆಯ ಜನರಿಗೂ ನ್ಯಾಯವನ್ನು ಒದಗಿಸಿಕೊಡುವಂತದ್ದಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣ ಮಾಡುವಂತದ್ದು ಸರ್ಕಾರದ ಕರ್ತವ್ಯ. ಸಂವಿಧಾನದ ಕರ್ತೃಗಳು ಈ ಕನಸನ್ನು ಕಂಡಿದ್ದರು, ಆ ಕನಸನ್ನು ನನಸಾಗಿ ಮಾಡುವಂತಹದ್ದು ನಮ್ಮ ಕರ್ತವ್ಯವಾಗಿದೆ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಿರುವ ಭ್ರಷ್ಟಾಚಾರ ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸರ್ಕಾರದಲ್ಲಿ ವಿಜಯೇಂದ್ರ ಅವರು ತಾವೇ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದರು. ಯಡಿಯೂರಪ್ಪನವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅಂಥವರು ಇಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದನ್ನು ನೋಡಿದಾಗ ನಗಬೇಕೋ, ಅಳಬೇಕೋ ಗೊತ್ತಾಗುವುದಿಲ್ಲ ಎಂದು ಇತಿಹಾಸವನ್ನು ನೆನಪಿಸಿದರು.

ಈ ಹಿಂದೆ ನಾನು, ಪರಮೇಶ್ವರ್‌ ಅವರು ಅನೇಕ ಬಾರಿ ಪಾದಯಾತ್ರೆ ಮಾಡಿದ್ದೇವೆ. ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಪಾದಯಾತ್ರೆಗಳು ಜನರ ಸಮಸ್ಯೆಗಳಿಗಾಗಿ, ಜನರ ಹಿತಕ್ಕಾಗಿ ನಡೆದವು. ಆದರೆ ಬಿಜೆಪಿಯವರು ಇಂದು ಯಾವುದೇ ಜನಪರ ವಿಚಾರವಿಲ್ಲದೆ ಕೇವಲ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾವುದೇ ಜನಪರ ಕೆಲಸ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಈಗ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈಗಾಗಲೇ ರಾಜ್ಯದ ಬರಗಾಲದ ವಿಚಾರವಾಗಿ ಪರಮೇಶ್ವರ್‌ ಅವರು ಮಾತನಾಡಿದ್ದಾರೆ. ಈ ಹಿಂದೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಕೇಂದ್ರದ ತಂಡ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಕೊನೆಗೆ ನಾವು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಬೇಕಾಯಿತು. ಅದರ ನಂತರ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು ಎಂದು ಕೇಂದ್ರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಆಕ್ರೋಶ ಹೊರಹಾಕಿದರು.

ಈಗಲೂ ನಾವು 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದೇವೆ. ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಕೇಂದ್ರದ ತಂಡ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡಬೇಕು. ಆದರೆ ಕೇಂದ್ರದ ತಂಡ ಬಂದು ವರದಿ ನೀಡಿದ ನಂತರವೂ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಎಂಬ ನಂಬಿಕೆ ನಮಗಿಲ್ಲ. ಕೊಟ್ಟರೂ ಕೂಡ 2000ನೇ ಇಸವಿಯಲ್ಲಿ ರೂಪಿಸಿದ ನಿಯಮಾವಳಿಗಳ ಪ್ರಕಾರವೇ ಅನುದಾನ ನೀಡಲಾಗುತ್ತದೆ. ಆ ನಿಯಮಾವಳಿಗಳನ್ನು ಬದಲಾಯಿಸಬೇಕು, ಇಲ್ಲವಾದರೆ ರಾಜ್ಯಕ್ಕೆ ಸಿಗುವ ಅನುದಾನ ಬಹಳ ಕಡಿಮೆಯಾಗುತ್ತದೆ ಎಂದು ನಾನು ಅನೇಕ ಬಾರಿ ಪ್ರಧಾನಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ ಈವರೆಗೂ ಆ ನಿಯಮಾವಳಿಗಳನ್ನು ಬದಲಾವಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಾಡನ್ನು ದೃಢ ಕರ್ನಾಟಕವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನೀವು ಹೊರಟಿದ್ದೀರಿ. ಅದರ ಕೈಪಿಡಿಯನ್ನೂ ಬಿಡುಗಡೆ ಮಾಡಲಾಗಿದೆ. ಯಾರು ಏನೇ ಮಾಡಿದರೂ, ಜನರ ಮುಂದೆ ಹೋಗುವಂತಹ ಕೆಲಸವನ್ನು ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಮ್ಮ ಮಾಲೀಕರು. ಅವರ ಮುಂದೆ ಸರ್ಕಾರದ ಕೆಲಸಗಳನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಿ. ‘ಪ್ರಜಾ ಸೇವೆ’ ಎಂಬ ಹೊಸ ಕಾರ್ಯಕ್ರಮ ತುಂಬಾ ಒಳ್ಳೆಯ ಕಾರ್ಯಕ್ರಮ. ಅದನ್ನು ಕಾಟಾಚಾರಕ್ಕೆ ಮಾಡಬೇಡಿ. ಪರಿಣಾಮಕಾರಿಯಾಗಿ ಮುಂದುವರಿಸಿ. ಪ್ರತಿಯೊಬ್ಬ ಸಚಿವರೂ ತಮ್ಮ ತಮ್ಮ ಜಿಲ್ಲೆಗಳಲ್ಲಿ ಜನಸಂದರ್ಶನ ನಡೆಸುವ ಕೆಲಸ ಮಾಡಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸುವ ಮೂಲಕ ನಿಜವಾದ ಪ್ರಜಾ ಸೇವೆ ಮಾಡಬೇಕು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *