ಇಬ್ಭಾಗಗೊಂಡ ಶಿವಸೇನೆಯ ಒಂದು ಬಣ ಮತ್ತು ಎರಡು ಬಣವಾಗಿರುವ ಶರತ್ ಪವಾರ್ ಸ್ಥಾಪಿತ ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮೊನ್ನೆಯಷ್ಟೆ ದೂರ ಸರಿದ ಡಿಎಂಕೆ ನಾಯಕರನ್ನು ಎನ್ಡಿಎ ಕೂಟದತ್ತ ತಿರುಗಿಸಿಕೊಳ್ಳಲು ದಿಲ್ಲಿ ಬಿಜೆಪಿ ಅಗ್ರ ನಾಯಕರು ರಣತಂತ್ರ ರೂಪಿಸಿರುವುದು ಕುತೂಹಲಕರ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮಂತ್ರಿ ಮಂಡಲ ಪುನಾರಚನೆಯ ಸಮಯ ಸನ್ನಿಹಿತವಾಗಿದೆ. ಬಿಜೆಪಿ ಮತ್ತು ಮಿತ್ರಕೂಟದ ಕೆಲ ಹಿರಿ, ಕಿರಿಯರಿಗೆ ಮಂತ್ರಿಮಂಡಲದಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳಿವೆ. ಪಂಜಾಬ್, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಸೇರಿದಂತೆ ಜೆನ್ಜೀ ಆಕರ್ಷಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಮುಖರು ತೆರೆಮರೆಯ ಹಿಂದೆ ಎಲ್ಲ ಬಗೆಯ ರಾಜಕೀಯ ಕಸರತ್ತು ಆರಂಭಿಸಿರುವುದು ಗಮನಾರ್ಹ.
ಮುಂದಿನ ಲೋಕಸಭೆ ಚುನಾವಣೆಯ ದಿಶೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದು, ಇದಕ್ಕೆ ಅನುಕೂಲಕರವಾಗಿ ಸರ್ಕಾರದಮಟ್ಟದಲ್ಲಿ ವೇದಿಕೆಯನ್ನು ಸೃಷ್ಟಿಸಲು ಪ್ರಧಾನಿ ಮೋದಿ ವ್ಯೂಹ ರಚಿಸಿದ್ದಾರೆ. ಇದೇ ವೇಳೆ ಇಬ್ಬಾಗಗೊಂಡ ಶಿವಸೇನೆಯ ಒಂದು ಬಣ ಮತ್ತು ಎರಡು ಬಣವಾಗಿರುವ ಶರತ್ ಪವಾರ್ ಸ್ಥಾಪಿತ ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮೊನ್ನೆಯಷ್ಟೆ ದೂರ ಸರಿದ ಡಿಎಂಕೆ – ಈ ಪಾರ್ಟಿ ನಾಯಕರನ್ನು ಎನ್ಡಿಎ ಕೂಟದತ್ತ ತಿರುಗಿಸಿಕೊಳ್ಳಲು ಬಿಜೆಪಿ ಅಗ್ರ ನಾಯಕರು ರಣತಂತ್ರ ರೂಪಿಸಿರುವುದು ಗಮನಾರ್ಹ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ದಿಲ್ಲಿ ಜಂತರ್ಮಂತರ್ ಬಳಿ ಭುಗಿಲಾದ ಸಿಜೆಪಿ ಪ್ರಭಾವವನ್ನು ಕುಗ್ಗಿಸಲು ಬಿಜೆಪಿ ಸರ್ವರೀತಿಯಲ್ಲಿ ಮುಂದಾಗಿದೆ. ಅಲ್ಲದೆ ಬಿಜೆಪಿಗೆ ಬೆನ್ನೆಲುಬಾಗಿ ಆರ್ ಎಸ್ ಎಸ್, ಈ ದೇಶವಲ್ಲದೆ ವಿದೇಶಗಳಲ್ಲಿಯೂ ತನ್ನ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ. ಈ ಎಲ್ಲ ಕಾರ್ಯತಂತ್ರಗಳ ಹಿಂದಿನ ಏಕೈಕ ಅಜೆಂಡಾ ಎಂದರೆ ಕೇಂದ್ರದಲ್ಲಿ ಬಿಜೆಪಿ ನೇತ್ರತ್ವದ ಸರ್ಕಾರವನ್ನು ೨೦೨೯ರ ಬಳಿಕವೂ ಮುಂದಿನ ಐದು ವರ್ಷಗಳಿಗೆ ಗಟ್ಟಿಗೊಳಿಸುವುದು. ದೇಶದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಜನವಿರೋಧಿ ಅಲೆ ಮತ್ತು ಯುವಕರ ನಿರುದ್ಯೋಗದಂತ ಸಮಸ್ಯೆಗಳು ದೇಶದಲ್ಲಿ ದೊಡ್ಡದಾಗಿ ಬಿಂಬಿತವಾಗದ ಹಾಗೆ ಎಚ್ಚರ ವಹಿಸುವುದು. ಅಲ್ಲದೆ ಕೇಡರ್ ಬೇಸ್ ಶಿಸ್ತಿನ ಮೂಲಕ ದೇಶದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಮೋದಿ ಸರ್ಕಾರದ ವರ್ಚಸ್ಸಿಗೆ ಯಾವುದೆ ಧಕ್ಕೆ ಬಾರದಂತೆ ಪರಿಸ್ಥಿತಿಗಳನ್ನು ಸರಿಯಾಗಿ ಮ್ಯಾನೇಜ್ ಮಾಡುವುದು ಮತ್ತು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳನ್ನು ವ್ಯವಸ್ಥಿತ ರೀತಿಯಲ್ಲಿ ದೂರ ಸರಿಸುವುದು. ಈಗಾಗಲೇ ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಶಿವಸೇನೆ ಒಡೆದ ಮನೆಗಳಾಗಿದ್ದು ಇಲ್ಲಿ ಬಿಜೆಪಿಯ ರಾಜಕೀಯ ಹಾದಿ ಸುಗಮವಾಗಿದೆ.
ಇನ್ನು ಬಿಹಾರದಲ್ಲಿ ಸದ್ಯಕ್ಕೆ ಜೆಡಿಯು ದೊಂದಿಗಿನ ಬಿಜೆಪಿ ಸಂಬಂಧ ಹಳಸಿಲ್ಲ. ಇತ್ತ ಆಂಧ್ರದಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ಅಲ್ಲದಿದ್ದರೂ ಸದ್ಯ ತೆಲುಗುದೇಶಂ ಮತ್ತು ಜನಸೇನಾ ಪಾರ್ಟಿಗಳು ಎನ್ಡಿಎ ಆಡಳಿತಕ್ಕೆ ಪೂರಕವಾಗಿಯೇ ಇದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಎಂಕೆ ಈಗ ಎನ್ಡಿಎ ಕೂಟ ಪ್ರವೇಶಿಸುವುದೇ ಎಂಬುದು ಕುತೂಹಲ. ಕೆಲವೇ ದಿನಗಳಲ್ಲಿ ವಿಸ್ತರಣೆಯಾಗಲಿರುವ ಕೇಂದ ಮಂತ್ರಿಮಂಡಲದಲ್ಲಿ ಏಕನಾಥ ಶಿಂಧೆ ಬಣದ ಶಿವಸೇನೆಯ ಪ್ರಮಖರಲ್ಲದೆ ತೆಲುಗುದೇಶಂ ಮತ್ತು ಜನಸೇನಾ ಪಾರ್ಟಿಗಳ ಸಂಸದರು ಮಂತ್ರಿಗಳಾಗುವ ಸಾದ್ಯತೆಗಳಿವೆ. ಒಟ್ಟಿನಲ್ಲಿ ಮಂತ್ರಿಮಂಡಲ ಪುನಾರಚನೆಯ ಮೂಲಕ ಬಿಜೆಪಿ ದೇಶದಲ್ಲಿ ರಾಜಕೀಯವಾಗಿ ತನ್ನ ಮುಷ್ಠಿಯನ್ನು ಮತ್ತಷ್ಟು ಬಿಗಿಗೊಳಿಸಲು ಸುದೀರ್ಘ ರಣತಂತ್ರ ರೂಪಿಸಿದೆ.


