ಮೊಬೈಲ್ ಕಲಿಕಾ ವೇದಿಕೆಯಾದ ಡ್ಯುಯೊಲಿಂಗೊ, ಭಾರತದ ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಏರ್‌ಟೆಲ್‌ನ ಬರೋಬ್ಬರಿ 37.6 ಕೋಟಿ ಚಂದಾದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪೂರ್ಣ 12 ತಿಂಗಳು ಸೂಪರ್ ಡ್ಯುಯೊಲಿಂಗೊ ಚಂದಾದಾರಿಕೆ ಉಚಿತವಾಗಿ ನೀಡಲಾಗುತ್ತದೆ.
ಡ್ಯುಯೊಲಿಂಗೊ ಜಾಗತಿಕವಾಗಿ ಜನಪ್ರಿಯ ಭಾಷಾ ಕಲಿಕಾ ತಾಣವಾಗಿದ್ದು, ಜಗತ್ತಿನ ಅತ್ಯುತ್ತಮ ಶಿಕ್ಷಣ ಪಠ್ಯ ಸೃಷ್ಟಿಸಿ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಮಾಡುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಈ ಆ್ಯಪ್ 40ಕ್ಕೂ ಅಧಿಕ ಭಾಷೆಗಳಲ್ಲಿ ಕೋರ್ಸ್‌ಗಳನ್ನು ಹೊಂದಿದ್ದು, ಚಿಕ್ಕ-ಚಿಕ್ಕ ಪಾಠಗಳು, ಆಟದ ರೂಪದ ತಂತ್ರಗಳು, ವೈಯಕ್ತೀಕರಿಸಿದ ಕಲಿಕೆ ಹಾಗೂ ಎಐ-ಚಾಲಿತ ಫೀಚರ್‌ಗಳ ಸಮ್ಮಿಲನದ ಮೂಲಕ ಭಾಷಾ ಕಲಿಕೆಯನ್ನು ಆಕರ್ಷಕ, ಸುಲಭ ಮತ್ತು ಪರಿಣಾಮಕಾರಿಯಾಗಿಸಿದೆ. ಬಳಕೆದಾರರು ಇದರ ಮೂಲಕ ಚೆಸ್, ಗಣಿತ ಹಾಗೂ ಸಂಗೀತ ಕಲಿಯಬಹುದಾಗಿದೆ.
ಈ ಪಾಲುದಾರಿಕೆಯು ಏರ್‌ಟೆಲ್ ಗ್ರಾಹಕರಿಗೆ ಜಾಹೀರಾತು ರಹಿತ ಡ್ಯುಯೊಲಿಂಗೊದ ಪ್ರೀಮಿಯಂ ಕಲಿಕಾ ಅನುಭವ ಒದಗಿಸಲಿದೆ. ಇದರಲ್ಲಿ ಅನ್‌ಲಿಮಿಟೆಡ್ ಎನರ್ಜಿ, ಎಐ-ಆಧಾರಿತ ರಿಯಲ್-ಟೈಮ್ ಮಾತನಾಡುವ ಅಭ್ಯಾಸ, ವೈಯಕ್ತಿಕ ಅಭ್ಯಾಸದ ಕಸರತ್ತುಗಳು ಹಾಗೂ ಮಾಡಿದ ತಪ್ಪುಗಳ ಪರಾಮರ್ಶೆಯ ಸೌಲಭ್ಯ ಒಳಗೊಂಡಿರಲಿವೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಭಾಷಾ ಕೌಶಲ್ಯಗಳು ಶಿಕ್ಷಣ, ವೃತ್ತಿಜೀವನ ಮತ್ತು ಜಾಗತಿಕ ಅವಕಾಶಗಳನ್ನು ಬಾಚಿಕೊಳ್ಳಲು ಹೆಬ್ಬಾಗಿಲಾಗಿ ಮಾರ್ಪಟ್ಟಿವೆ. ಲಕ್ಷಾಂತರ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಡಿಜಿಟಲ್ ಕಲಿಕಾ ವೇದಿಕೆಯನ್ನು ತಲುಪಿಸಿ, ತನ್ನ ವಿಶಿಷ್ಟ ಗ್ರಾಹಕ ಸೇವಾ ಆದ್ಯತೆಯನ್ನು ಏರ್‌ಟೆಲ್ ಮತ್ತಷ್ಟು ವಿಸ್ತರಿಸಿದೆ.
ಈ ಸೂಪರ್ ಡ್ಯುಯೊಲಿಂಗೊ ಸೌಲಭ್ಯವು ಏರ್‌ಟೆಲ್ ಮೊಬೈಲ್, ವೈ-ಫೈ ಹಾಗೂ ಡಿಟಿಎಚ್ ಗ್ರಾಹಕರಿಗೆ ಲಭ್ಯವಿರಲಿದೆ. ಬಳಕೆದಾರರು ಯಾವುದೇ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡುವ ಅಗತ್ಯವಿಲ್ಲದೆ, ನೇರವಾಗಿ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಈ ಆಫರ್ ಪಡೆದುಕೊಳ್ಳಬಹುದಾಗಿದೆ.
ಡ್ಯುಯೊಲಿಂಗೊ ಇಂಡಿಯಾದ ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥೆ ರಾಶಿ ಧನಾನಿ , “ಭಾರತವು ನಮ್ಮ ಪಾಲಿಗೆ ಅತ್ಯಂತ ಮಹತ್ವದ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿನ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಕಾರ್ಯಪಡೆಯ ಅಗತ್ಯಳ ಕಾರಣದಿಂದ ಭಾಷಾ ಕಲಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಭಾಷೆ ಕಲಿಯುವುದು ಎಲ್ಲರಿಗೂ ಸುಲಭವಾಗಿ ಸಿಗುವಂತಿರಬೇಕು, ಆಕರ್ಷಕವಾಗಿರಬೇಕು ಮತ್ತು ನಿತ್ಯದ ಬದುಕಿನಲ್ಲಿ ಸುಲಲಿತವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಬೇಕು. ಏರ್‌ಟೆಲ್ ಜೊತೆಗಿನ ನಮ್ಮ ಈ ಒಡಂಬಡಿಕೆ ಸೂಪರ್ ಡ್ಯುಯೊಲಿಂಗೊವನ್ನು ವಿಶಾಲ ಸಮೂಹಕ್ಕೆ ತಲುಪಿಸಲಿದ್ದು, ದೇಶಾದ್ಯಂತ ಕಲಿಯುವವರಿಗೆ ಸುಧಾರಿತ ಅನುಭವ ನೀಡಲಿದೆ ಎಂದು ಹೇಳಿದರು.
ಸೂಪರ್ ಡ್ಯುಯೊಲಿಂಗೊ ಸಾಮಾನ್ಯ ಕಲಿಕೆಗಿಂತ ಒಂದು ಹೆಜ್ಜೆ ಮುಂದಿದ್ದು, ಕಲಿಯುವವರು ಕೇವಲ ಪಾಠಗಳನ್ನು ಮುಗಿಸುವುದಕ್ಕೆ ಸೀಮಿತವಾಗದೆ, ಭಾಷೆಯನ್ನು ಸಕ್ರಿಯವಾಗಿ ಮಾತನಾಡಲು ಮತ್ತು ಬಳಸಲು ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತದೆ.
ಭಾರತೀಯರಿಗಾಗಿ ಡ್ಯುಯೊಲಿಂಗೊ ಇತ್ತೀಚೆಗಷ್ಟೇ ಪಂಜಾಬಿಯಿಂದ ಇಂಗ್ಲಿಷ್ ಕಲಿಯಿರಿ ಎಂಬ ಕೋರ್ಸ್ ಲೋಕಾರ್ಪಣೆಗೊಳಿಸಿದೆ. ಇದು ಹಿಂದಿ, ಬೆಂಗಾಲಿ, ತೆಲುಗು, ತಮಿಳು ಹಾಗೂ ಉರ್ದು ಭಾಷಿಕರಿಗಾಗಿ ಈಗಾಗಲೇ ಇರುವ ಭಾರತೀಯ ಭಾಷಾ ಕೋರ್ಸ್‌ಗಳ ಸಾಲಿಗೆ ಹೊಸ ಸೇರ್ಪಡೆಗೊಂಡಿದೆ. ಭಾರತದಾದ್ಯಂತ ಇರುವ ವಿವಿಧ ಭಾಷಾ ಹಿನ್ನೆಲೆಯ ಕಲಿಯುವವರ ವೈವಿಧ್ಯತೆಗೆ ತಕ್ಕಂತೆ ಶಿಕ್ಷಣ ಒದಗಿಸುವ ಮತ್ತು ಪ್ರತಿಯೊಬ್ಬರೂ ತಮಗೆ ಆರಾಮದಾಯಕ ಭಾಷೆಯಲ್ಲೇ ಕಲಿಯುವಂತೆ ಮಾಡುವ ಡ್ಯುಯೊಲಿಂಗೊದ ಬದ್ಧತೆಯನ್ನು ಸಾರುತ್ತದೆ.
ಗ್ರಾಹಕರಿಗೆ ಸಿಗುವ ಈ ಪ್ರಯೋಜನವು ಪ್ರಸ್ತುತ ಇರುವ ಸೂಪರ್ ಡ್ಯುಯೊಲಿಂಗೊ ಚಂದಾದಾರಿಕೆಯ ಆಧಾರದ ಮೇಲೆ ಅನ್ವಯವಾಗಲಿದ್ದು, 1 ವರ್ಷದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.


