Friday, September 04, 2026
Menu

ಬಾಗಲಕೋಟೆ ಶಾಲೆ ಛಾವಣಿ ಕುಸಿತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ

lokayukta

ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ತರಗತಿ ನಡೆಯುತ್ತಿರುವಾಗ ಛಾವಣಿ ಕುಸಿದು ಮಕ್ಕಳು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್‌ ಪಾಟೀಲ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲಾಖೆಯ ಆಯುಕ್ತ, ಹೆಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾಪಂಚಾಯತ್‌ ಸಿಇಒ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಅಕ್ಟೋಬರ್ 7 ರಂದು ಹಾಜರಾಗಿ ವರದಿ ಸಲ್ಲಿಸುವಂತೆ ಧಾರವಾಡದ ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ನಿರ್ದೇಶಕರು ಹಾಗೂ ಬಿಇಒಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡಗಳ ಸ್ಥಿತಿಗತಿ, ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯಗಳ ಸುರಕ್ಷತಾ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತವು ಘಟನೆಯಿಂದ ಎಚ್ಚೆತ್ತುಕೊಂಡು ದೀರ್ಘಕಾಲೀನ ಕ್ರಮಗಳೂ ಸೇರಿದಂತೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ.

ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಮಾನತುಗೊಳಿಸಲು ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.

ಡಿಡಿಪಿಐ, ಬಿಇಒ ಮತ್ತು ತಾಲೂಕು ಇಒಗೆ ಶೋಕಾಸ್‌ ನೋಟಿಸ್‌ಗಳನ್ನು ನೀಡಲಾಗಿದೆ. ಸುರಕ್ಷತಾ ಕ್ರಮವಾಗಿ 4 ರಿಂದ 6ನೇ ತರಗತಿಯ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗೆ ಸ್ಥಳಾಂತರಿಸಲಾಗುತ್ತಿದೆ. ಸಾರಿಗೆ ವೆಚ್ಚ ಶಿಕ್ಷಣ ಇಲಾಖೆ ಭರಿಸಲಿದೆ.

ನಾಲ್ಕು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಇವುಗಳಲ್ಲಿ ಎರಡು ಶಿಕ್ಷಣ ಇಲಾಖೆಯಿಂದ ಮತ್ತು ಉಳಿದ ಎರಡು VBGRAMG ಯೋಜನೆಯಡಿ ನಿರ್ಮಾಣವಾಗಲಿವೆ.

ಜಿಲ್ಲೆಯಾದ್ಯಂತ ಶಾಲಾ ಆವರಣಗಳ ಮೇಲೆ ಹಾದುಹೋಗಿರುವ ಹೈ-ಟೆನ್ಷನ್ ವಿದ್ಯುತ್ ತಂತಿಗಳನ್ನು ತಕ್ಷಣವೇ ಗುರುತಿಸಿ ತೆರವುಗೊಳಿಸುವಂತೆ ಹೆಸ್ಕಾಂ ಗೆ ಸೂಚನೆ ನೀಡಲಾಗಿದೆ.

Related Posts

Leave a Reply

Your email address will not be published. Required fields are marked *