ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿತು 7 ನೇ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಬಗ್ಗೆ ಚರ್ಚಿಸಿ ಪಕ್ಷಾತೀತ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಪಕ್ಷದ ಶಾಸಕರು ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಅಂತಿಮಗೊಳಿಸಬಾರದು. ಆರು ರಾಜ್ಯಗಳ 56,000 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಕೇಂದ್ರ ಪ್ರಸ್ತಾಪಿಸಿದೆ. ಕರ್ನಾಟಕದ 20,668 ಚ.ಕಿ.ಮೀ. ಪ್ರದೇಶ, 10 ಜಿಲ್ಲೆಗಳ (ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ) 33 ತಾಲೂಕುಗಳು ಹಾಗೂ 1,449 ಗ್ರಾಮಗಳು ESA ವ್ಯಾಪ್ತಿಗೆ ಸೇರುತ್ತವೆ. ಕೃಷಿಕರ ಜೀವನೋಪಾಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದರು.
ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿ, ಕೇಂದ್ರ ಸರ್ಕಾರವು 31 ಜುಲೈ 2024ರ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿತ್ತು. ಆದಾಗ್ಯೂ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರ ಇದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಜನರ ಅಭಿಪ್ರಾಯವನ್ನೂ ಪಡೆಯಲಾಗುವುದು. ಜನಜಾಗೃತಿ ಮೂಡಿಸಲಾಗುವುದು. ರಾಜ್ಯದ ನಿಲುವನ್ನು ಕೇಂದ್ರ ಗೌರವಿಸಬೇಕು. ಈ ವಿಚಾರವಾಗಿ ಕಾನೂನು ಚೌಕಟ್ಟಿನಲ್ಲಿ ಚರ್ಚಿಸಲಾಗುವುದು. ಕರ್ನಾಟಕಕ್ಕೆ ಒಂದು ನಿಯಮ ಹಾಗೂ ಬೇರೆಡೆ ಇನ್ನೊಂದು ನಿಯಮವನ್ನು ಕೇಂದ್ರ ಕೈಗೊಂಡಿದೆ ಎಂದರು.
ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಶಾಸಕರ ಪಾತ್ರ
ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಶಾಸಕರ ಪಾತ್ರದ ಬಗ್ಗೆ ಅವರಿಗೆ ವಿವರಿಸಲಾಗಿದೆ. 100 ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಶೀಘ್ರವೇ ಉಪಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ. ಮತ್ತಷ್ಟು ತಾಲೂಕುಗಳನ್ನು ಬರಗಾಲ ಪೀಡಿತ ಘೋಷಣೆ ಮಾಡುವ ಬಗ್ಗೆ ಸರ್ಕಾರ ನಿರ್ಣಯ ಮಾಡಲಿದ್ದು, ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಿದ್ದೇನೆ ಎಂದು ಹೇಳಿದರು.
ಸಚಿವರು ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಭೆ ನಡೆಸಲು ಸೂಚಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಈ ರೀತಿ ರಾಜ್ಯದ ಎಲ್ಲಾ 224 ಕ್ಷೇತ್ರಕ್ಕೆ ಸಚಿವರು ಭೇಟಿ ನೀಡುವ ಕಾರ್ಯಕ್ರಮಹಮ್ಮಿಕೊಳ್ಳಬೇಕು. ಶಾಸಕರು ಪಂಚಾಯತಿ ಮಟ್ಟದಲ್ಲಿಯೂ ಜನರ ಸಮಸ್ಯೆಗಳನ್ನು ಆಲಿಸಲು ಪ್ರಜಾಸೇವೆ ಇಲಾಖೆಯನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಅರ್ಹ ಮತದಾರರ ಹಕ್ಕು ಉಳಿಸಲು ಸರ್ಕಾರ ಬದ್ಧ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಹೆಚ್ಚು ಜನರು ಮತಪಟ್ಟಿಯಿಂದ ಕೈಬಿಡಲಾಗಿದೆ. ಕಾಯಂ ನಿವಾಸ ಪತ್ರ , ಜಾತಿ ಪ್ರಮಾಣ ಪತ್ರ ಸರ್ಕಾರ ಒದಗಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿ ಸಭೆ ನಡೆಸಿ ಮತಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರನ್ನು ಕೋರಲಾಗಿದೆ. ಜನರಿಗೆ ಮತದ ಶಕ್ತಿ ಹಾಗೂ ಮತದ ಹಕ್ಕಿನ ಬಗ್ಗೆ ಶಾಸಕರು ಅರಿವು ಮೂಡಿಸಬೇಕು. ಅರ್ಹ ಮತದಾರರಿಗೆ ಅನ್ಯಾಯವಾಗಬಾರದು. ಜನರಿಗೆ ಮತದಾನದ ಹಕ್ಕು ಕೊಡಿಸಲು ಶ್ರಮಿಸಬೇಕೆಂದು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಗಳಲ್ಲಿ ಬಡವರಿಗೆ 50 ಸಾವಿರ ಸೈಟ್ ಹಂಚಿಕೆ
ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗಳ ಹಿಂದಿನ ಪರಿಸ್ಥಿತಿ, ಪ್ರಸ್ತುತ ಪರಿಸ್ಥಿತಿ ಸೇರಿದಂತೆ ಹಲವು ವಿವರ ಪಡೆಯಬೇಕು. ಅಭಿವೃದ್ಧಿ ಕೆಲಸಗಳಲ್ಲಿ ಬೋಗಸ್ ಬಿಲ್, ಕಾಮಗಾರಿಗಳಿಗೆ ಅವಕಾಶ ನೀಡಬಾರದು. ಪ್ರತಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ 50 ಸಾವಿರ ಸೈಟ್ ಹಂಚಿಕೆಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸರ್ಕಾರಿ ಜಮೀನಿಗಳ ಗುರುತಿಸಲಾಗಿದೆ. ಬಡವರಿಗೆ ಸೈಟ್ ಹಂಚುವ ಯೋಜನೆ ಇದಾಗಿದೆ ಎಂದರು.
ಎಸ್ ಐ ಆರ್ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ
ನವೆಂಬರ್ ಒಳಗೆ ಪಂಚಾಯತಿ ಹಾಗೂ ಪಾಲಿಕೆ ಚುನಾವಣೆಗಳನ್ನು ನಡೆಸಲಾಗುವುದು. ಎಸ್ ಐ ಆರ್ ಮುಗಿದ ತಕ್ಷಣ ಚುನಾವಣೆ ನಡೆಸಲು ಆಯೋಗಕ್ಕೆ ಪತ್ರ ಬರೆಯಲಾಗುವುದು. ಗ್ರಾಮೀಣ , ತಾಲ್ಲೂಕುಗಳಿಂದ ಜನರ ವಲಸೆ ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆದ್ಯತೆ ನೀಡುವಂತೆ ಶಾಸಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಪಾರ್ಕ್ ಗಳ ಜಾಗ ಬಳಕೆ ಬಗ್ಗೆ ಮಸೂದೆಗೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ”ರಸ್ತೆ ಅಗಲೀಕರಣ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ರೀತಿ ಭೂಮಿ ಬಳಸುವ ಚಿಂತನೆಯಿದೆ. ನಾವು ಖಾಸಗಿಯವರಿಗೆ ಅವಕಾಶ ನೀಡುವುದಿಲ್ಲ. ಬೇರೆ ಸರ್ಕಾರದಲ್ಲಿ ಅವರು ಅವರ ಪಕ್ಷ ಹಾಗೂ ಕಾರ್ಯಕರ್ತರಿಗೆ ನೀಡಿರುವುದು ಹೇಳಲೇ? ಸದಾಶಿವನಗರದ ನಮ್ಮ ನಿವಾಸದ ಬಳಿ ಪಾರ್ಕ್ ನೋಡಿ ಎಂದು ತಿರುಗೇಟು ನೀಡಿದರು.
ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, ನಾಗೇಂದ್ರ ಪಕ್ಷದ ವಿಚಾರದಲ್ಲಿ ಎಂದು ಹಿಂದೇಟು ಹಾಕಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ. ಅವರು ನಿರಪರಾಧಿ. ಆದರೂ ನಾವು ರಾಜೀನಾಮೆ ಪಡೆದಿದ್ದೆವು. ಅವರ ನಾಯಕತ್ವದಲ್ಲಿ ಅಪಾರ ವಿಶ್ವಾಸವಿದೆ ಎಂದರು.
ದೆಹಲಿ ಭೇಟಿ ಬಗ್ಗೆ ಕೇಳಿದಾಗ, ದೆಹಲಿ ಭೇಟಿ ವೇಳೆ ಕೇಂದ್ರದ ಸಚಿವರು, ಕಾನೂನು ತಜ್ಞರ ಜೊತೆ ಚರ್ಚೆ. ನಮ್ಮ ಪಕ್ಷದ ಕಚೇರಿ ಶಂಕುಸ್ಥಾಪನೆ ಬಗ್ಗೆ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದು ಉತ್ತರಿಸಿದರು.
ಬೆಂಗಳೂರಿನ ಮುಂದಿನ 25 ವರ್ಷಗಳ ನೀರಿನ ಭದ್ರತೆಗಾಗಿ ಪ್ರಮುಖ ಕೆರೆಗಳ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ಒತ್ತುವರಿ ತಡೆಗೆ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ. ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಹಾಗೂ ಬೈರಮಂಗಲ ಕೆರೆಗಳನ್ನು ಅಭಿವೃದ್ಧಿಪಡಿಸಿ ಹೊಸ ಜೀವ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕೆರೆಗಳ ಒತ್ತುವರಿ ತಡೆ, ಅಗತ್ಯವಿರುವ ಕಡೆ ಆಳಗೊಳಿಸುವುದು ಹಾಗೂ ಕೊಳಚೆ ನೀರು ಸೇರುವುದನ್ನು ತಡೆಯುವ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಕುರಿತು BWSSB, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ BDA ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳಿಗೆ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರಕ್ಕೆ ಹಸಿರು ಹೊದಿಕೆ ಹೆಚ್ಚಿಸಲು ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವಂತಪುರ, ಮಂಡೂರು ಹಾಗೂ ಜ್ಯೋತಿಪುರ ಸೇರಿದಂತೆ ಒಟ್ಟು 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದರು.


