ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಗದು ರಹಿತ ಯುಪಿಐ ಪಾವತಿಯ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದು ಸರಿಯಷ್ಟೆ. ಆದರೆ ಮುಂದಿನ ದಶಕದಲ್ಲಿ ಈ ವ್ಯವಸ್ಥೆಯಲ್ಲೀಗ ಕಂಡು ಬಂದ ಪ್ರಮುಖ ದೋಷಗಳು ಮತ್ತು ತೊಡಕುಗಳನ್ನು ನಿವಾರಿಸಿ ಜನ ಸ್ನೇಹಿ ಸುಗಮ ವ್ಯವಸ್ಥೆಗೆ ಸರ್ಕಾರ ಭದ್ರ ಬುನಾದಿ ಹಾಕಬೇಕಿದೆ.
ದೇಶದಲ್ಲಿ ನಗದು ರಹಿತ ವಹಿವಾಟು ಶುರುವಾಗಿ ಒಂದು ದಶಕ ಕಳೆದಿದೆ. ಹಣಕಾಸು ನಿರ್ವಹಣೆಯ ಈ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವೀಗ ಒಂದು ಹಂತದಲ್ಲಿ ಯಶಸ್ಸು ಕಂಡಿರುವವುದು ಗಮನಾರ್ಹ. ಯುಪಿಐ ವ್ಯವಸ್ಥೆ ಆರಂಭವಾದ ದಿನಗಲ್ಲಿ ಕೆಲವೊಂದು ವ್ಯಾಪಕ ಆತಂಕ ಹಾಗೂ ಕಳವಳ ಇತ್ತು. ಆದರೆ ಇವೆಲ್ಲವೂ ಕ್ರಮೇಣ ತೆರೆಮರೆಗೆ ಸರಿದಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಯುಪಿಐ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು ಇದು ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಐಟಿ, ಬಿಟಿ ನಗರಿಯಾದ ಬೆಂಗಳೂರಿನಲ್ಲಿ ಕೂಡಾ ಯುಪಿಐ ಪದ್ದತಿ ಮುಂಚೂಣಿಯಲ್ಲಿದೆ. ಒಟ್ಟಾರೆ ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿರುವ ಅಂಕಿ, ಅಂಶಗಳ ಪ್ರಕಾರ, ಯುಪಿಐ ವ್ಯವಸ್ಥೆ ಜಾರಿಯಾದ ಬಳಿಕ ದೇಶದ ಹಣಕಾಸು ವ್ಯವಹಾರದಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿದೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿದೆ.
ಪ್ರಪಂಚದ ಮುಂದುವರಿದ ದೇಶಗಳಲ್ಲಿ ಈಗಾಗಲೇ ಯುಪಿಐ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಇದು ಭಾರತದಂತಹ ಜಾಗತಿಕ ಅತಿ ದೊಡ್ಡ ಮಾರುಕಟ್ಟೆಯೂ ಆಗಿದ್ದು ಇಲ್ಲಿನ ಗ್ರಾಹಕರು, ನಗದು ರಹಿತ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುವುದೆಂದರೆ ಇದೊಂದು ಗಮನಾರ್ಹ ಬದಲಾಣೆ ಸರಿ. ವಿವಿಧ ಸರ್ಕಾರಗಳ ವಿವಿಧ ಜನಪರ ಯೋಜನೆಗಳ ಪರಿಣಾಮಕಾರಿ ಜಾರಿಗೂ ಯುಪಿಐ, ಗಮನಾರ್ಹ ರೀತಿಯಲ್ಲಿ ನೆರವಾಗಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದಿಂದ ನೇರ ಪಾವತಿಗೆ ಯುಪಿಐ ಸಹಕಾರಿಯಾಗಿದೆ. ಇದು ಒಂದು ರೀತಿಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಪ್ಪಿಸಿರುವುದು ಗಮನಾರ್ಹ. ಮಿಗಿಲಾಗಿ ಪ್ರತಿಯೋರ್ವ ಪ್ರಜೆ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಕಟ್ಟುಪಾಡಿಗೆ ಒತ್ತು ನೀಡಿದಂತಾಗಿರುವುದು ವಾಸ್ತವ.
ದೇಶದ ಎಲ್ಲ ಕಡೆ ಮತ್ತು ಎಲ್ಲ ರಂಗಗಳಲ್ಲಿ ಯುಪಿಐ ವಹಿವಾಟು ಕಡ್ಡಾಯಗೊಳಿಸುವ ಚಿಂತನೆ ಸರ್ಕಾರದ್ದು . ಆದರೆ ಈ ಚಿಂತನೆಗಳ ಕಟ್ಟುನಿಟ್ಡಿನ ಜಾರಿಗೆ ಮುನ್ನ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕರೆನ್ಸಿ ಮುದ್ರಣ ವಿಚಾರದಲ್ಲಿ ಆರ್ಬಿಐ ತಾಳಿರುವ ನೀತಿ ಮತ್ತು ಸೈಬರ್ ಅಪರಾಧಗಳ ಕಡಿವಾಣದ ವಿಚಾರದಲ್ಲಿ ಮತ್ತಷ್ಟು ಚಿಂತನೆ ಮತ್ತು ಆಲೋಚನೆ ಅತಿ ಮುಖ್ಯ. ದೇಶದ ಮಹಾನಗರಗಳು ಮತ್ತು ಪಟ್ಟಣಗಳಲ್ಲಿ ಇಂದು ಗ್ರಾಹಕರು ಯುಪಿಐ ಅನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿದ್ದರೂ ವಂಚಕರು ಮತ್ತು ಸೈಬರ್ ಕಳ್ಳರು ಯುಪಿಐ ಗ್ರಾಹಕರ ಹಣ ಕದಿಯುವ ವಿಷಯದಲ್ಲಿ ಸಕ್ರಿಯವಾಗಿರುವುದು ಗಮನಾರ್ಹ.
ಒಟ್ಟಿನಲ್ಲಿ ಗ್ರಾಹಕರಿಗೆ ಯುಪಿಐ ಬಳಸಿದ ರೀತಿಯಲ್ಲಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಲಭ್ಯವಿರುವ ಶಾಸನಾತ್ಮಕ ನಿಯಮಾವಳಿಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಗದು ರಹಿತ ಯುಪಿಐ ಪಾವತಿಯ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದು ಸರಿಯಷ್ಟೆ . ಆದರೆ ಮುಂದಿನ ದಶಕದಲ್ಲಿ ಈ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಪ್ರಮುಖ ದೋಷಗಳು ಮತ್ತು ತೊಡಕುಗಳನ್ನು ಸರ್ಕಾರ ನಿವಾರಿಸಿ ಜನ ಸ್ನೇಹಿ ಭದ್ರ ವ್ಯವಸ್ಥೆಗೆ ಬುನಾದಿಯನ್ನು ಹಾಕಬೇಕಿದೆ


