Menu

ಅಮೆರಿಕದ ನಿರ್ಬಂಧಗಳಿಗೆ ತಲೆ ಬಾಗುವುದಿಲ್ಲ, ಪ್ರತೀಕಾರಕ್ಕೆ ಸಿದ್ಧವೆಂದ ಇರಾನ್‌

ಅಮೆರಿಕದ ಯಾವುದೇ ಬೆದರಿಕೆ, ನಿರ್ಬಂಧ ಮತ್ತು ಹೊಸ ಕ್ರಮಗಳಿಗೆ ತಲೆ ಬಾಗುವುದಿಲ್ಲ, ಅಗತ್ಯವಾದರೆ ತೀವ್ರ ಪ್ರತೀಕಾರಕ್ಕೆ ಸಿದ್ಧವೆಂದು ಇರಾನ್‌ ಎಚ್ಚರಿಕೆ ನೀಡಿದೆ. ಟ್ರಂಪ್‌ ಆಡಳಿತ ಇರಾನ್‌ ವಿರುದ್ಧ ಆರ್ಥಿಕ ನಿರ್ಬಂಧ ಮತ್ತಷ್ಟು ಬಿಗಿಗೊಳಿಸಿರುವ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.

ಅಮೆರಿಕದ ಹೊಸ ನಿರ್ಬಂಧಗಳಿಂದ ಇರಾನ್‌ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಇತರ ರಾಷ್ಟ್ರಗಳೊಂದಿಗಿನ ತನ್ನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ನಿರ್ಬಂಧಿಸುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ ಎಂದು ಇರಾನ್‌ ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಘರ್‌ ಗಾಲಿಬಾಫ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕ ಹಣಕಾಸು ಸಚಿವ ಸ್ಕಾಟ್‌ ಬೆಸೆಂಟ್‌ ಸೋಮವಾರ ಇರಾನ್‌ ಜತೆ ವ್ಯಾಪಾರ ಮುಂದುವರಿಸುವ ದೇಶಗಳು ಡಾಲರ್‌ ಆಧಾರಿತ ಹಣಕಾಸು ವ್ಯವಸ್ಥೆಯಿಂದ ಹೊರಗುಳಿಯುವ ಅಪಾಯ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ಇರಾನ್‌ನ ಆರ್ಥಿಕ ಜೀವನಾಡಿಯನ್ನು ಕತ್ತರಿಸಿ ಹಾಕುವ ಉದ್ದೇಶದಿಂದ ಈ ಹೊಸ ಕ್ರಮ ಘೋಷಿಸಿದ್ದಾರೆ. ಇದಾದ ಬಳಿಕ ಇರಾನ್‌ ಸ್ಪಷ್ಟ ಮತ್ತು ಕಠಿಣ ಪ್ರತಿಕ್ರಿಯೆ ನೀಡಿದೆ.

ಯಾವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ಅದು ಯಾವಾಗ ಜಾರಿಗೆ ಬರಲಿದೆ ಎಂಬುದನ್ನು ಬೆಸೆಂಟ್‌ ಬಹಿರಂಗಪಡಿಸಿಲ್ಲ. ಹೊಸ ನಿಯಮಗಳನ್ನು ಪಾಲಿಸಲು ಆ ದೇಶಗಳಿಗೆ ಸಮಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಮೆರಿಕದ ಖಜಾನೆ ಇಲಾಖೆ 60 ವ್ಯಕ್ತಿಗಳು, ಸಂಸ್ಥೆಗಳು ಮತ್ತು ಹಡಗುಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕದ ಬೆದರಿಕೆಗಳಿಗೆ ಯಾರೂ ಬೆಲೆ ನೀಡುವುದಿಲ್ಲ. ಇತರ ದೇಶಗಳೊಂದಿಗಿನ ಸಂಬಂಧಗಳನ್ನು ಮತ್ತಷ್ಟು ನಿರ್ಬಂಧಿಸುವ ಆರ್ಥಿಕ ಸ್ಥಿತಿಯಲ್ಲಿ ಅಮೆರಿಕ ಇಲ್ಲ ಎಂದು ಇರಾನ್‌ ನಾಯಕರು ಹೇಳಿದ್ದಾರೆ.
ಇರಾನ್‌ ಆರ್ಥಿಕ ಸಚಿವ ಅಲಿ ಮದಾನಿಜಾದೆ, ಅಮೆರಿಕದ ನಿರ್ಬಂಧಗಳನ್ನು ಎದುರಿಸಲು ದೇಶ ಸಂಪೂರ್ಣ ಸಿದ್ಧವಾಗಿದೆ. ಶತ್ರುಗಳು ನಮ್ಮ ವಿರುದ್ಧ ಆರ್ಥಿಕ ಭಯೋತ್ಪಾದಕ ದಾಳಿ ನಡೆಸಲು ಮುಂದಾಗಿದ್ದಾರೆ. ಈ ಆಟವನ್ನು ಹೇಗೆ ಆಡಬೇಕು ಎಂಬುದು ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಹೊಸೈನ್‌ ಮೊಹೆಬ್ಬಿ, ಇರಾನ್‌ನ ಮೂಲಸೌಕರ್ಯಕ್ಕೆ ಬೆದರಿಕೆ ಎದುರಾದರೆ ಅಮೆರಿಕದ ಪ್ರಮುಖ ಹಿತಾಸಕ್ತಿಗಳು ಮತ್ತು ಇಂಧನ ಸಾಗಣೆ ಮಾರ್ಗಗಳ ಮೇಲೆ ಹೊಡೆತ ನೀಡುವುದಾಗಿ ಎಚ್ಚರಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

Related Posts

Leave a Reply

Your email address will not be published. Required fields are marked *