ಸದನದ ಕಲಾಪಗಳಲ್ಲಿ ಪ್ರತಿಪಕ್ಷದ ಸದಸ್ಯರ ಹೇಳಿಕೆಗಳು, ಛಾಯಾಚಿತ್ರಗಳು ಹಾಗೂ ವೀಡಿಯೊ ತುಣುಕುಗಳನ್ನು ಅಧಿಕೃತ ಮಾಧ್ಯಮ ಪ್ರಸಾರದಿಂದ ಉದ್ದೇಶಪೂರ್ವಕವಾಗಿ ಕೈ ಬಿಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ ವಿಧಾಸಭಾ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ.

ಈ ಬಾರಿ ಮುಂಗಾರು ಅಧಿವೇಶನ ಆರಂಭಗೊಂಡ ನಂತರ ಪ್ರತಿಪಕ್ಷದ ಕಾರ್ಯ ಚಟುವಟಿಕೆಗಳು ಮುದ್ರಣ ಮತ್ತು ದೂರದರ್ಶನ ಮಾಧ್ಯಮಗಳಿಗೆ ಸಮಸರ್ಪಕವಾಗಿ ತಲುಪುತ್ತಿಲ್ಲ. ಮುಖ್ಯಮಂತ್ರಿ, ಸಚಿವರು, ಆಡಳಿತಾರೂಢ ಪಕ್ಷದ ಶಾಸಕರ ಕಾರ್ಯಕ್ರಮಗಳು, ಹೇಳಿಕೆಗಳು ಅಡ್ಡಿಯಿಲ್ಲದೆ ಪ್ರಸಾರವಾಗುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿಪಕ್ಷಕ್ಕೂ ಸಮಾನ ಹಾಗೂ ನ್ಯಾಯಸಮ್ಮತ ಮಾಧ್ಯಮ ಪ್ರಸಾರ ದೊರೆಯುವಂತೆ ವಿಧಾನಸಭಾಧ್ಯಕ್ಷರು ಮಧ್ಯಪ್ರವೇಶಿಸಬೇಕು ಎಂದು ಅಶೋಕ ಮನವಿ ಮಾಡಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


