Menu

ವಿದೇಶಿ ಆರೋಪಿಗಳಿಗೆ ಜಾಮೀನು: ಕಟ್ಟುನಿಟ್ಟಾದ ನಿರ್ದೇಶನ ನೀಡಿದ ಸುಪ್ರೀಂ

supreme court

ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯನ್ವಯ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿದೇಶಿ ಪ್ರಜೆಗಳಿಗೆ ಜಾಮೀನು ನೀಡುವಾಗ ಇನ್ನಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ೧೨ ನಿರ್ದೇಶನಗಳನ್ನು ಪ್ರಕಟಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ನಿರ್ದೇಶನಗಳನ್ನು ನೀಡಿದ್ದು, ವಿದೇಶಿ ಆರೋಪಿಗಳಿಗೆ ಜಾಮೀನು ನೀಡುವ ಮೊದಲು ಆರೋಪಿ ಹಾಗೂ ಜಾಮೀನುದಾರರ ಹಿನ್ನೆಲೆ, ವಿಳಾಸ, ಆಸ್ತಿ ಮತ್ತು ಹಣಕಾಸು ವಿವರಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದೆ.

ವಿದೇಶಿ ಆರೋಪಿಯ ಪಾಸ್‌ಪೋರ್ಟ್‌ನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು, ವಿದೇಶ ಪ್ರಯಾಣಕ್ಕೆ ನ್ಯಾಯಾಲಯದ ಅನುಮತಿ ಕಡ್ಡಾಯ, ಜಾಮೀನಿನ ಮೇಲೆ ಬಿಡುಗಡೆಯಾದ ವಾರದೊಳಗೆ FRRO ನೋಂದಣಿ ಮಾಡಿಕೊಳ್ಳಬೇಕು.

ಈ ಬಗ್ಗೆ ತನಿಖಾಧಿಕಾರಿ ಹಾಗೂ ನ್ಯಾಯಾಲಯಕ್ಕೆ ಲಿಖಿತವಾಗಿ ಮಾಹಿತಿ ನೀಡಬೇಕು. ಜಾಮೀನಿಗೆ ಇಬ್ಬರು ಜಾಮೀನುದಾರರು ಕಡ್ಡಾಯ. ಇಬ್ಬರನ್ನು ಒದಗಿಸಲು ಸಾಧ್ಯವಾಗದಿದ್ದರೆ ಕಾರಣವನ್ನು ದಾಖಲಿಸಿ ನ್ಯಾಯಾಲಯ ವಿನಾಯಿತಿ ನೀಡಬಹುದು. ಜಾಮೀನುದಾರರ ಪರಿಶೀಲನೆಯನ್ನು ಮೂರು ದಿನಗಳೊಳಗೆ ಪೂರ್ಣಗೊಳಿಸಬೇಕು. ಪರಿಶೀಲನಾ ವರದಿ ಬಂದ ಬಳಿಕವೇ ಆರೋಪಿಯನ್ನು ಬಿಡುಗಡೆ ಮಾಡಬೇಕು.

ಆರೋಪಿಯ ಭಾರತದಲ್ಲಿನ ವಾಸಸ್ಥಳ ಮತ್ತು ಸಂಪರ್ಕ ವಿವರಗಳನ್ನು ಜಾಮೀನು ಆದೇಶದ ಮೂರು ದಿನಗಳೊಳಗೆ ಮತ್ತೊಮ್ಮೆ ಸ್ಥಳ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಬೇಕು. ಭಾರತದಲ್ಲಿನ ಆದಾಯ ಅಥವಾ ಹಣದ ಮೂಲ ಹಾಗೂ ಇಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಬೇಕು. ಆರೋಪಿಯ ವಿರುದ್ಧದ ಪ್ರಕರಣದ ಕುರಿತು ತನಿಖಾಧಿಕಾರಿ ಸಂಬಂಧಪಟ್ಟ ರಾಯಭಾರ ಕಚೇರಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು.

ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಈ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಜಾಮೀನುದಾರರ ವಿವರಗಳನ್ನು ಒಳಗೊಂಡ ಕೇಂದ್ರೀಕೃತ ಡೇಟಾಬೇಸ್ ರೂಪಿಸಬೇಕು. ಜಾಮೀನುದಾರ ನಕಲಿ ಎಂದು ನಂತರ ಪತ್ತೆಯಾದರೆ, ಪರಿಶೀಲನೆಯಲ್ಲಿ ಭಾಗಿಯಾದ ಪೊಲೀಸ್, ನ್ಯಾಯಾಲಯದ ಸಿಬ್ಬಂದಿ ಅಥವಾ ಕಂದಾಯ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ವಿದೇಶಿ ಆರೋಪಿಗೆ ಜಾಮೀನುದಾರರಾಗುವ ವ್ಯಕ್ತಿಯ ಆಸ್ತಿಯ ಮೇಲೆ ಬಾಂಡ್ ಮೊತ್ತಕ್ಕೆ ಸಮನಾದ ಲಿಯನ್ ದಾಖಲಿಸಬೇಕು. ಜಾಮೀನು ಷರತ್ತು ಉಲ್ಲಂಘನೆಯಾದರೆ ನ್ಯಾಯಾಲಯ ಆ ಮೊತ್ತವನ್ನು ವಸೂಲಿ ಮಾಡಬಹುದು.

ಆಸ್ತಿ ಮತ್ತು ಹಣಕಾಸು ದಾಖಲೆಗಳ ತ್ವರಿತ ಪರಿಶೀಲನೆಗಾಗಿ ಹೈಕೋರ್ಟ್‌ಗಳ ಐಟಿ ಸಮಿತಿಗಳು ಡಿಜಿಟಲ್ ಪೋರ್ಟಲ್‌ಗಳನ್ನು ರೂಪಿಸಬೇಕು. ಕರ್ನಾಟಕ ಹೈಕೋರ್ಟ್‌ನಲ್ಲಿ ಈಗಾಗಲೇ ಅಳವಡಿಸಿರುವ ಮಾದರಿಯನ್ನು ಪರಿಗಣಿಸಬಹುದು  ನಿರ್ದೇಶನ ನೀಡಲಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 5 ಕೆ.ಜಿ. ಹೆರಾಯಿನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ಪ್ರಜೆ ಚಿಡಿಬೆರೆ ಕಿಂಗ್ಸ್ಲಿ ನವ್ಚಾರಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿ ಆರೋಪಿಯನ್ನು ಬಂಧಿಸುವಂತೆ ಸೂಚಿಸಿತ್ತು. ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಿದ್ದರೂ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ಪರಿಶೀಲನೆಯಲ್ಲಿ ಆರೋಪಿಯ ಪರವಾಗಿ ಸಲ್ಲಿಸಲಾಗಿದ್ದ ಜಾಮೀನುದಾರರೇ ಅಸ್ತಿತ್ವದಲ್ಲಿಲ್ಲ ಎಂಬುದು ಪತ್ತೆಯಾಯಿತು. ಇದರಿಂದ ಸಾಮಾನ್ಯ ಮೇಲ್ಮನವಿ ಪ್ರಕರಣವಾಗಿದ್ದ ವಿಚಾರ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು. ಜಾಮೀನು ವ್ಯವಸ್ಥೆಯಲ್ಲಿನ ಇಂತಹ ಲೋಪಗಳು ನ್ಯಾಯ ವಿತರಣಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಕೋರ್ಟ್ ಹೇಳಿದೆ.

ಗಲ್ಲು ಬದಲು ಪರ್ಯಾಯ ವಿಧಾನ: ಅರ್ಜಿ ವಜಾಗೊಳಿಸಿದ ಸುಪ್ರೀಂ

ಮರಣದಂಡನೆ ಜಾರಿ ಸಂದರ್ಭದಲ್ಲಿ ಗಲ್ಲಿಗೇರಿಸುವ ಪದ್ಧತಿಯನ್ನು ರದ್ದುಪಡಿಸಿ, ಕಡಿಮೆ ನೋವುಂಟು ಮಾಡುವ ಪರ್ಯಾಯ ವಿಧಾನವನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಭವಿಷ್ಯದಲ್ಲಿ ಹೊಸ ವೈಜ್ಞಾನಿಕ, ವೈದ್ಯಕೀಯ ಅಥವಾ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದರೆ ಈ ವಿಚಾರವನ್ನು ಮರುಪರಿಶೀಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಮರಣದಂಡನೆಯನ್ನು ಗಲ್ಲಿಗೇರಿಸುವ ಮೂಲಕ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 354(5) ಹಾಗೂ ಅದಕ್ಕೆ ಸಮಾನವಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ನಿಯಮಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿತ್ತು.

Related Posts

Leave a Reply

Your email address will not be published. Required fields are marked *