ಹೆಚ್ಚು ಮೊಬೈಲ್ ಬಳಕೆ ಮಾಡಬೇಡ, ಹೆಚ್ಚು ರೀಲ್ಸ್ ನೋಡಬೇಡ ಎಂದು ತಾಯಿ ಬೈದು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.
ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ (20) ಆತ್ಮಹತ್ಯೆ ಮಾಡಿಕೊಂಡವಳು.ಮೇಘಾ ಧಾರವಾಡದ ಖಾಸಗಿ ಕಾಲೇಜೊಂದರಲ್ಲಿ ಡಿಇಡಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹೆಚ್ಚು ಮೊಬೈಲ್ ಬಳಕೆ ಮಾಡುತ್ತಾಳೆ, ರೀಲ್ಸ್ ನೋಡುತ್ತಾಳೆ ಎಂದು ತಾಯಿ ಬೈದು ಬುದ್ಧಿವಾದ ಹೇಳಿದ್ದಳು. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲವೆಂದು ಸೋದರಿಯರು ಆತ್ಮಹತ್ಯೆ
ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ್ದಕ್ಕೆ ನೊಂದ ಅಪ್ರಾಪ್ತ ವಯಸ್ಕ ಸೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಶಹಾಬಾದ್ ಪಟ್ಟಣದ ಶಾಂತನಗರದಲ್ಲಿ ನಡೆದಿದೆ. ಪಿಯುಸಿ ದ್ವಿತೀಯ ವರ್ಷದ ಪೂಜಾ (17) ಹಾಗೂ ಹಣಮಂತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ತಾಯಿ ಹತ್ತು ವರ್ಷದ ಹಿಂದೆ ಮೃತಪಟ್ಟಿದ್ದು, ಸಹೋದರ ಹೈದರಾಬಾದ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ತಂದೆ ಸೇನೆಯಿಂದ ನಿವೃತ್ತಿಯಾಗಿ ಶಹಬಾದ್‌ನಲ್ಲೇ ವಾಸವಾಗಿದ್ದು, ಕುಡಿತಕ್ಕೆ ದಾಸನಾಗಿದ್ದ. ಹಬ್ಬಕ್ಕೆ ಬಟ್ಟೆ ಕೊಡಿಸುವಂತೆ ಸಹೋದರಿಯರು ಕೇಳಿದ್ದರು. ತಂದೆ ಬಟ್ಟೆ ಕೊಡಿಸದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


