Wednesday, August 05, 2026
Menu

ನಮ್ಮ ಒಪ್ಪಿಗೆಯಿಲ್ಲದೆ ಹರ್ಮುಜ್‌ನಲ್ಲಿ ಹಡಗು ಸಂಚರಿಸುವಂತಿಲ್ಲ: ಅಮೆರಿಕಕ್ಕೆ ಇರಾನ್‌ ತಿರುಗೇಟು

ನಮ್ಮ ಒಪ್ಪಿಗೆಯಿಲ್ಲದೆ ಹರ್ಮುಜ್‌ನಲ್ಲಿ ಹಡಗು ಸಂಚರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಅಮೆರಿಕಕ್ಕೆ ಇರಾನ್‌ ತಿರುಗೇಟು ನೀಡಿದೆ. ಹರ್ಮುಜ್‌ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಯಾವುದೇ ದೇಶದ ಅನುಮತಿ ಅಥವಾ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಎಂದು ಹೇಳಿರುವ ಅಮೆರಿಕಕ್ಕೆ ಇರಾನ್‌ ಕಠಿಣವಾಗಿ ಪ್ರತಿಕ್ರಿಯಿಸಿದೆ.

ಜಾಗತಿಕವಾಗಿ ಪ್ರಾಮುಖ್ಯತೆ ಪಡೆದಿರುವ ಹರ್ಮುಜ್‌ ಜಲಂದಿಯಲ್ಲಿ ಮುಕ್ತ ಸಂಚಾರ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.  ಅಮೆರಿಕದ ಅಧಿಕಾರಿ ಅಲ್ ಜಜೀರಾಗೆ ನೀಡಿದ ಮಾಹಿತಿಯ ಪ್ರಕಾರ, ಜಲಸಂಧಿಯಲ್ಲಿ ತಾತ್ಕಾಲಿಕವಾಗಿ ರೂಪಿಸಲಾಗುವ ಯಾವುದೇ ಸಾಗಣೆ ಮಾರ್ಗಗಳಿಗೆ ಅನುಮತಿ, ಎನ್‌ಒಸಿ ಅಥವಾ ಶುಲ್ಕದ ಅಗತ್ಯವಿರುವುದಿಲ್ಲ. ಈ ಜಲಸಂಧಿಯ ಮೇಲಿನ ಸಂಪೂರ್ಣ ನಿಯಂತ್ರಣ ಯಾವುದೇ ಒಂದು ದೇಶಕ್ಕಿಲ್ಲ. ಗಿ ಯಾವ ಹಡಗು ಸಂಚರಿಸಬೇಕು ಅಥವಾ ಸಂಚರಿಸಬಾರದು ಎಂದು ನಿರ್ಧರಿಸುವ ಅಧಿಕಾರವೂ ಯಾರಿಗೂ ಇಲ್ಲ.

ಇರಾನ್ ಸರ್ಕಾರ ಅಮೆರಿಕ ಹೇಳಿಕೆಯನ್ನು ನಿರಾಕರಿಸಿದ್ದು, ಪರಮೋಚ್ಚ ನಾಯಕನ ಹಿರಿಯ ಸೇನಾ ಸಲಹೆಗಾರ ಮೊಹ್ಸೆನ್ ರೆಜಾಯಿ ಮಾತನಾಡಿ, ಇರಾನ್‌ ಅನುಮೋದಿಸದ ಯಾವುದೇ ಸಾಗಣೆ ಮಾರ್ಗವನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿ, ಇರಾನ್ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸೇನಾ ಕ್ರಮ ಕೈಗೊಂಡಿದೆ. ಅನಧಿಕೃತ ಮಾರ್ಗ ಬಳಸುವ ಅಮೆರಿಕದ ಯುದ್ಧನೌಕೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದರು. ಮೊದಲ ಹಂತದಲ್ಲಿ ವಾಣಿಜ್ಯ ಹಡಗುಗಳ ಸಾಮಾನ್ಯ ಸಂಚಾರವನ್ನು ಆರಂಭಿಸುವುದು, ನಂತರಇರಾನ್‌ನ ಅಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಸುವುದು ಯೋಜನೆಯಾಗಿದೆ ಎಂದು ತಿಳಿಸಿದ್ದರು.

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಮನವಿ ಪರಿಗಣಿಸಿ ಇರಾನ್ ಮೇಲಿನ ಯೋಜಿತ ಸೇನಾ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ, ಅಮೆರಿಕದೊಂದಿಗೆ ನೇರ ಅಥವಾ ಪರೋಕ್ಷ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇವಲ ಒಮನ್ ಮೂಲಕ ನಡೆಯುವ ಮಾತುಕತೆಯಿಂದ ಜಲಸಂಧಿ ತೆರೆಯುವುದಿಲ್ಲ. ಅಮೆರಿಕ ಇರಾನ್ ವಿರುದ್ಧದ ಸೇನಾ ಕ್ರಮಗಳನ್ನು ಸಂಪೂರ್ಣ ನಿಲ್ಲಿಸಬೇಕು ಹಾಗೂ ಮುಂದಿಟ್ಟಿರುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ನಂತರವೇ ಹರ್ಮುಜ್‌ ಸ್ಥಿತಿ ಹಿಂದಿನಂತಾಗಲಿದೆ ಎಂದು ಇರಾನ್ ಮೂಲಗಳು ತಿಳಿಸಿವೆ.

Related Posts

Leave a Reply

Your email address will not be published. Required fields are marked *