ಮಹಾರಾಷ್ಟ್ರದ ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಕನಿಷ್ಠ ಆರು ಜನ ಪ್ರಾಣ ಕಳೆದುಕೊಂಡಿದ್ದು, ಎಂಟು ಮಂದಿ ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಲಾಜಿ ನಗರದ ಕೊಹಿನೂರ್ ಕಟ್ಟಡದ ಒಂದು ಭಾಗ ಗುರುವಾರ ರಾತ್ರಿ ಕುಸಿದು ಬಿದ್ದಿದೆ, ರಕ್ಷಣಾ ತಂಡ ಆರು ಜನರ ಶವಗಳನ್ನು ಅವಶೇಷಗಳಿಂದ ಹೊರತೆಗೆದಿದೆ. ಕಟ್ಟಡವು ಒಟ್ಟು 48 ಕೊಠಡಿ ಹೊಂದಿದ್ದು, ಪ್ರತಿ ಮಹಡಿಯಲ್ಲಿ 12 ಕೊಠಡಿಗಳಿವೆ. ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಕಟ್ಟಡದಿಂದ ಬಿರುಕು ಬಿಡುವ ಶಬ್ದಗಳುಕೇಳಿ ಬಂದಾಗ ಗಾಬರಿಗೊಂಡ ಸ್ಥಳೀಯರು ಹಲವು ಕುಟುಂಬಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ಕೆಲವು ನಿವಾಸಿಗಳು ಕಟ್ಟಡದಿಂದ ಹೊರಹೋಗುತ್ತಿರುವಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟರಿಂದ 10 ಮಂದಿ ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಸಾಧ್ಯತೆಯಿದೆ. ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ಸಿಲುಕಿದವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


