ಕುಂದಾಪುರದ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬರಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದವರು.
ಐವನ್ ರಿಚರ್ಡ್ ಕೆಲವು ವ್ಯವಹಾರ ನಡೆಸುತ್ತಿದ್ದರು. ಮೊದಲ ಪತ್ನಿಯನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದಾಗ ಹೋಲಿ ರೋಸರಿ ಚರ್ಚ್ ಎದುರು ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್‌ನಿಂದ ಐವನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವಗೊಂಡು ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಕಾರಣ ಏನು ಎಂಬುದು ತನಿಖೆಯ ಬಳಿಕ ಬಯಲಾಗಬೇಕಿದೆ. ಕುಂದಾಪುರ ಪೊಲೀಸರು ಹಾಗೂ ಸೊಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಬಕೆಟ್‌ಗೆ ಬಿದ್ದು ಮಗು ಸಾವು
ಹಾಸನನಗರದ ವಲ್ಲಭಭಾಯಿ ರಸ್ತೆಯ ಮನೆಯೊಂದರಲ್ಲಿ ಬಕೆಟ್‌ನಲ್ಲಿ ಬಿದ್ದು ಎಂಟು ತಿಂಗಳ ಮಗು ಮೃತಪಟ್ಟಿದೆ. ಮೃತಪಟ್ಟ ಪುಷ್ಪಲೋಚನ ಗಿರೀಶ್-ಚೈತ್ರಾ ದಂಪತಿಯ ಮಗು.
ಗಿರೀಶ್ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಹೆಣ್ಣುಮಕ್ಕಳು. ಪುಷ್ಪಲೋಚನ ಮೂರನೆಯವಳು. ಚೈತ್ರಾ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಬಂದ ಮಗು ಬಕೆಟ್‌ನಲ್ಲಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


