ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದ್ದು, ಕಪ್ಪು ಸಮುದ್ರ ಬಂದರು ಸಮೀಪ ಡ್ರೋನ್ ಮತ್ತು ಕ್ಷಿಪಣಿ ದಾಳಿಯಾಗಿದೆ. ಚೋರ್ನೊಮೊರ್ಸ್ಕ್ ಬಂದರಿನಲ್ಲಿ ಸಿಲುಕಿರುವ ಹಡಗಿನಲ್ಲಿ 13 ಭಾರತೀಯ ನಾವಿಕರಿದ್ದಾರೆ. ಯಾವಾಗ ಬೇಕಾದರೂ ಹಡಗಿಗೆ ಕ್ಷಿಪಣಿ ಅಪ್ಪಳಿಸುವ ಆತಂಕ ಇದೆ ಎಂದು ಭಾರತೀಯ ನಾವಿಕರ ಒಕ್ಕೂಟ ಹೇಳಿದೆ.
ಹಡಗಿನ ಸಮೀಪ ಪದೇಪದೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಆಗುತ್ತಲೇ ಇದೆ. ಯಾವ ಸಮಯದಲ್ಲಾದರೂ ನೇರವಾಗಿ ಹಡಗಿಗೆ ಅಪ್ಪಳಿಸಬಹುದೆಂಬ ಭಯ ನಾವಿಕರನ್ನು ಕಾಡುತ್ತಿದೆ.ಈ ನಾವಿಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹಾಗೂ ಹಡಗಿನ ಮಾಲೀಕರಿಗೆ ಒಕ್ಕೂಟ ಮನವಿ ಮಾಡಿದೆ.
ಹಡಗಿನಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾದ ವೀಡಿಯೊವನ್ನು ಒಕ್ಕೂಟ ಎಕ್ಸ್ನಲ್ಲಿ ಶೇರ್ ಮಾಡಿದೆ. ವೀಡಿಯೊ ಗಮನಿಸಿದಾಗ ಹಡಗಿನ ಸುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿದೆ. ಬಂದರಿನ ಮೇಲೆ ನಡೆದ ದಾಳಿಯ ಸನ್ನಿವೇಶ ಕಾಣಿಸುತ್ತಿದೆ ಎನ್ನಲಾಗಿದೆ.
.ಜು.18 ರಂದು ನಡೆದ ದಾಳಿಯಲ್ಲಿ ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನಲ್ಲಿದ್ದ ಭಾರತೀಯ ಪ್ರಜೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು.


