ನ್ಯಾಯಾಲಯದ ವಿಚಾರಣೆಗಳ ನೇರ ಪ್ರಸಾರದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ , ರೀ ಪೋಸ್ಟ್ ಮಾಡುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ವೀವ್ಸ್, ಲೈಕ್ಗಾಗಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ವೀಡಿಯೊಗಳನ್ನು ಅನುಮತಿಯಿಲ್ಲದೆ ಕಟ್, ಎಡಿಟ್, ಅಪ್ಲೋಡ್, ರೀ ಪೋಸ್ಟ್ ಮಾಡುವುದು ಹಾಗೂ ಅವುಗಳಿಂದ ಹಣ ಸಂಪಾದಿಸುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠ ಈ ಆದೇಶ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಿತ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ವಅರ ಪೂರ್ವಾನುಮತಿ ಪಡೆಯದೆ ನ್ಯಾಯಾಲಯದ ನೇರಪ್ರಸಾರದ ವೀಡಿಯೊ ಅಥವಾ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳು, ಡಿಜಿಟಲ್ ವೇದಿಕೆಗಳು ಅಥವಾ ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿ ಕೊಳ್ಳುವಂತಿಲ್ಲ ಎಂದು ತಿಳಿಸಿದೆ.
ನ್ಯಾಯಾಲಯದ ವಿಚಾರಣೆಗಳನ್ನು ಯೂಟ್ಯೂಬ್ ಶಾರ್ಟ್ಸ್, ಇನ್ಸ್ಟಾಗ್ರಾಮ್ ರೀಲ್ಸ್, ಮೀಮ್ಸ್ ಅಥವಾ ಇತರೆ ಡಿಜಿಟಲ್ ರೂಪಗಳಲ್ಲಿ ಸಂಪಾದಿಸಿ ವೈರಲ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಬಂಧ ವಿಧಿಸಿದೆ.
ಈ ಆದೇಶವು ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳು ನ್ಯಾಯಾಂಗದ ದಿನನಿತ್ಯದ ಸುದ್ದಿ ವರದಿಗಾರಿಕೆ ನಡೆಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯದ ಆದೇಶಗಳು, ವಿಚಾರಣೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ಸುದ್ದಿಯಾಗಿ ಪ್ರಕಟಿಸುವ ಸ್ವಾತಂತ್ರ್ಯ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.
ಆದೇಶವು ಸುಪ್ರೀಂ ಕೋರ್ಟ್ ಮಾತ್ರವಲ್ಲದೆ ದೇಶದ ಎಲ್ಲಾ ಹೈಕೋರ್ಟ್ಗಳ ನೇರಪ್ರಸಾರದ ವೀಡಿಯೊಗಳಿಗೂ ಅನ್ವಯಿಸುತ್ತದೆ. ನ್ಯಾಯಾಲಯದ ವೀಡಿಯೊಗಳ ಕಾಪಿ, ಎಡಿಟ್ , ಪೋಸ್ಟ್ , ರೀ ಪೋಸ್ಟ್ ಮಾಡುವುದಕ್ಕೆ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದಕ್ಕೆ ಪೂರ್ವಾನುಮತಿ ಕಡ್ಡಾಯವಾಗಿದೆ.
ಲೈವ್ ಸ್ಟ್ರೀಮಿಂಗ್ ವೀಡಿಯೊಗಳ ದುರ್ಬಳಕೆ ತಡೆಯಲು ಸೂಕ್ತ ನಿಯಮಾವಳಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂ ಕೋರ್ಟ್ ಅಧಿಕೃತ ವೆಬ್ಸೈಟ್ನಲ್ಲಿ ಪ್ರಮುಖ ಪ್ರಕರಣಗಳ ನೇರಪ್ರಸಾರ ಹಾಗೂ ದಾಖಲಾಗಿರುವ ವೀಡಿಯೊ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಸಾರ್ವಜನಿಕ ಪ್ರವೇಶದ ಹೆಸರಿನಲ್ಲಿ ಅವುಗಳನ್ನು ದುರ್ಬಳಕೆ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಸಂದೇಶ ನೀಡಿದೆ.


