ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಮಾಡಿ, ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ನಡೆಯಲಿಲ್ಲ. ಇಂದು ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿರುವಾಗ ಅವರನ್ನು ಬಂಧಿಸಿದ್ದಾರೆ. ನನ್ನನ್ನು ಪೋಲೀಸರು ಎಳೆದಾಡಲು ಮುಂದಾದಾಗ ರಾಹುಲ್ ಗಾಂಧಿ , ಅವರು ಮುಖ್ಯಮಂತ್ರಿ ಅವರನ್ನು ಮುಟ್ಟಬಾರದು ಎಂದು ತಾಕೀತು ಮಾಡಿದರು. ನಂತರ ನನಗೆ ಮನವಿ ಮಾಡಿದರು, ನಾನು ಪಕ್ಕಕ್ಕೆ ಬಂದೆ ಎಂದು ವಿವರಿಸಿದರು.
ರಾಹುಲ್ ಗಾಂಧಿ ಅವರು ಸಚಿವ ಸಂಪುಟಕ್ಕೆ ಮಾನದಂಡ ವಿಧಿಸಿರುವ ಬಗ್ಗೆ ಹಾಗೂ ಹೊಸ ಪ್ರಯೋಗದ ಬಗ್ಗೆ ಕೇಳಿದಾಗ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರಾದರೂ ಮಾಧ್ಯಮಗಳ ಮುಂದೆ ಚರ್ಚೆ ಮಾಡುತ್ತಾರಾ? ಬೋಸರಾಜು ಶಾಸಕರಾಗದಿದ್ದರೂ ಮಂತ್ರಿ ಮಾಡಿಕೊಳ್ಳಲಿಲ್ಲವೇ? ಕೃಷ್ಣ ಅವರ ಸರ್ಕಾರದಲ್ಲಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಿಲ್ಲವೇ? ಮಾಧ್ಯಮದವರನ್ನು ಎಂಎಲ್ಸಿ, ಎಂಪಿ ಮಾಡಿಕೊಂಡಿಲ್ಲವೇ? ಎಂದರು.
ಅಚ್ಚರಿ ಅಂಶ ಇದೆಯೇ ಎಂದು ಕೇಳಿದಾಗ, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಏನು ಬೇಕಾದರೂ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಚಾರಕ್ಕೆ ನೀವು ಮತ್ತೆ ದೆಹಲಿಗೆ ಬರುತ್ತೀರಾ ಎಂದು ಕೇಳಿದಾಗ, ನಮ್ಮ ನಾಯಕರು ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಅಭಿಪ್ರಾಯ ಪಡೆಯುತ್ತಾರೆ. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗಲೂ ಇದೇ ರೀತಿ ಮಾಡಿದ್ದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್ ಅವರು ಸೇರಿ ಚರ್ಚೆ ಮಾಡಿದ್ದೇವೆ ಎಂದು ಉತ್ತರಿಸಿದರು.
ಬಾಕಿ ಇರುವ ಎಲ್ಲಾ 20 ಸ್ಥಾನ ತುಂಬುತ್ತೀರಾ ಎಂದು ಕೇಳಿದಾಗ, ನನಗೆ ಗೊತ್ತಿಲ್ಲ. ಎಲ್ಲಾ ಸ್ಥಾನ ತುಂಬಲು ನಾನು ಬಯಸುತ್ತೇನೆ. ಖಾಲಿ ಇಟ್ಟುಕೊಳ್ಳುವುದರಲ್ಲಿ ಅರ್ಥ ಇಲ್ಲ. ಚೀಫ್ ವಿಪ್, ವಿಧಾನ ಪರಿಷತ್ ಸಭಾಪತಿ, ಸ್ಪೀಕರ್ ಸ್ಥಾನಗಳನ್ನೂ ತುಂಬಬೇಕು ಎಂದರು.
ನನಗೆ ಇಂದೇ ಅವಕಾಶ ನೀಡಿದರೆ ಇಂದೇ ಪಟ್ಟಿ ಅಂತಿಮಗೊಳಿಸಲು ಸಿದ್ಧ. ಈ ವಿಚಾರ ಮುಂದೂಡಲು ನನಗೂ ಇಷ್ಟವಿಲ್ಲ. ನಾನು ಸೋಮವಾರವೇ ಬರಬೇಕಾಗಿತ್ತು. ಹಾಸನದಲ್ಲಿ ನನ್ನ ಕರ್ತವ್ಯ ಮಾಡಬೇಕಾಗಿತ್ತು. ಹೀಗಾಗಿ ನಾನು ಮಂಗಳವಾರ ದೆಹಲಿಗೆ ಬಂದಿರುವೆ. ಮಂಗಳವಾರ ರಾತ್ರಿ ಸಭೆ ಸೇರುವ ನಿರ್ಧಾರ ಆಗಿತ್ತು. ಆದರೆ ನಮ್ಮ ನಾಯಕರನ್ನು ಬಂಧಿಸಿದ್ದಾರೆ. ಅವರು ಬಂದ ಬಳಿಕ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಯುವಕರಿಗೆ ಅವಕಾಶ ಸಿಗುವುದೇ ಎಂದು ಕೇಳಿದಾಗ, ನನಗೆ 136 ಜನ ಶಾಸಕರು, ಪರಿಷತ್ ಸದಸ್ಯರು ಎಲ್ಲರೂ ಒಂದೇ. ಎಲ್ಲರಿಗೂ ಅರ್ಹತೆ ಇದೆ. ನಾನು ಮೊದಲ ಬಾರಿಗೆ ಮಂತ್ರಿಯಾದವನು. ಯುವಕರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಬಯಕೆ. ದೆಹಲಿ ನಾಯಕರು ನೀಡುವ ಮಾರ್ಗದರ್ಶನದಂತೆ ಕೇಳಬೇಕು ಎಂದರು.


