Menu

ಸಮುದ್ರದ ಮಡಿಲಲ್ಲಿ ಪ್ಲಾಸ್ಟಿಕ್ ವಿಷ: ಬಾರ್ನಕಲ್ಸ್‌ ಎಚ್ಚರಿಕೆ

ನಮ್ಮ ಕಣ್ಣಿಗೆ ಕಾಣದ ಅದೆಷ್ಟೋ ಅಪಾಯಗಳು ಸಾಗರದ ಆಳದಲ್ಲಿ ಅಡಗಿವೆ. ಕಡಲತೀರದ ಸೌಂದರ್ಯವನ್ನು ಸವಿಯುವ  ನಮಗೆ ಅಲ್ಲಿನ ಪುಟ್ಟ ಜೀವಿಗಳು ನೀಡುತ್ತಿರುವ ಭೀಕರ ಎಚ್ಚರಿಕೆ ಸದ್ದು ಮಾಡುತ್ತಿದೆ. ಅತಿ ಸ್ವಚ್ಛವೆಂದು ಹೆಸರಾದ ಗುಜರಾತ್‌ನ ಶಿವ್ರಾಜ್‌ಪುರ ಕಡಲತೀರದಲ್ಲಿ ಪತ್ತೆಯಾದ ಮೈಕ್ರೋಪ್ಲಾಸ್ಟಿಕ್ 39  ಪ್ರಮಾಣದ  ಮಾಲಿನ್ಯ ಪರಿಸರವಾದಿಗಳ ನಿದ್ದೆಗೆಡಿಸಿದೆ.

ಪರ್ಷಿಯನ್ ಗಲ್ಫ್‌ನಲ್ಲಿ ಹಡಗುಗಳ ವೇಗವನ್ನು ಕುಂಠಿತಗೊಳಿಸಿ ಜಾಗತಿಕವಾಗಿ ಸುದ್ದಿಯಾಗಿದ್ದ ಪುಟ್ಟ ಜೀವಿಗಳಾದ ಬಾರ್ನಕಲ್ಸ್‌  ಗುಜರಾತ್ ಕರಾವಳಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಭೀಕರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ. ಹೇಮಚಂದ್ರಾಚಾರ್ಯ ಉತ್ತರ ಗುಜರಾತ್ ವಿಶ್ವವಿದ್ಯಾಲಯ ಮತ್ತು ಮಹಾರಾಜ
ಸಯಾಜಿರಾವ್ ವಿಶ್ವವಿದ್ಯಾಲಯದ  ಸಂಶೋಧಕರು ನಡೆಸಿದ ಅಧ್ಯಯನವು ಈ ಕಳವಳಕಾರಿ ವಿಷಯವನ್ನು ಬೆಳಕಿಗೆ ತಂದಿದೆ.

ಇಲ್ಲಿ ಅಚ್ಚರಿಯ ಸಂಗತಿ ಎಂದರೆ, ಪರಿಸರ ಸ್ನೇಹಿ ಮತ್ತು ಸ್ವಚ್ಛತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ  ಬ್ಲೂ ಫ್ಲ್ಯಾಗ್39; ಪ್ರಮಾಣೀಕೃತ ಮೈಕ್ರೋಪ್ಲಾಸ್ಟಿಕ್ ಕಣಗಳು ಶಿವ್ರಾಜ್‌ಪುರ ಕಡಲತೀರದಲ್ಲಿ ಅಧಿಕವಾಗಿ ಪತ್ತೆಯಾಗಿವೆ. 2024ರ ಒಂದೇ ವರ್ಷದಲ್ಲಿ  6.8 ಲಕ್ಷ ಪ್ರವಾಸಿಗರನ್ನು ಸೆಳೆದಿದ್ದ ಈ ತಾಣದಲ್ಲಿರುವ  ಬಾರ್ನಕಲ್ಸ್‌ಗಳ ದೇಹದಲ್ಲಿ ಪ್ಲಾಸ್ಟಿಕ್ ಕಣಗಳು ಹೆಚ್ಚಾಗಿ ಕಂಡುಬಂದಿದೆ. ಮಾರ್ಚ್ 2023 ರಿಂದ ಆಗಸ್ಟ್ 2024 ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ  ಸಾವಿರಾರು ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಕಳಪೆ ತ್ಯಾಜ್ಯ ನಿರ್ವಹಣೆ, ಮೀನುಗಾರಿಕಾ ಚಟುವಟಿಕೆಗಳು ಮತ್ತು ಜವಳಿ ಉದ್ಯಮದ ರಾಸಾಯನಿಕಯುಕ್ತ ತ್ಯಾಜ್ಯಗಳು ಸಮುದ್ರಕ್ಕೆ ಸೇರುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣ.

ಪತ್ತೆಯಾದ ಕಣಗಳಲ್ಲಿ ಶೇ. 1-2 ಮಿ.ಮೀ. ಗಾತ್ರದ ನೀಲಿ ಮತ್ತು ಕಪ್ಪು ಬಣ್ಣದ ನಾರುಗಳೇ ಹೆಚ್ಚು. ಇವು ಪ್ಯಾಕೇಜಿಂಗ್ ವಸ್ತುಗಳು ಮತ್ತು ಮೀನುಗಾರಿಕಾ ಬಲೆಗಳ ಪ್ಲಾಸ್ಟಿಕ್‌ನಿಂದ (ಪಾಲಿಪ್ರೊಪಿಲೀನ್ ಮತ್ತು ಪಾಲಿಎಥಿಲೀನ್) ಬಂದಿವೆ. MSUನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೃಪಾಲ್ ಪಟೇಲ್ ಹೇಳುವಂತೆ ಮೈಕ್ರೋಪ್ಲಾಸ್ಟಿಕ್‌ಗಳು ಸಮುದ್ರದ ಆಹಾರ ಸರಪಳಿಯನ್ನು ಪ್ರವೇಶಿಸಿವೆ. ಬಾರ್ನಕಲ್ಸ್‌ಗಳು ನೀರನ್ನು ಸೋಸಿ ಆಹಾರ ಪಡೆಯುವ ಜೀವಿಗಳಾದ್ದರಿಂದ ಅವು ಈ ಮಾಲಿನ್ಯವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದು ಅಂತಿಮವಾಗಿ ಮೀನು ಮತ್ತು ಇತರ ಸಮುದ್ರ ಆಹಾರಗಳ ಮೂಲಕ ಮನುಷ್ಯನ ದೇಹವನ್ನು ಸೇರುತ್ತಿದೆ. ಇದು ಅತ್ಯಂತ ಗಂಭೀರ ವಿಷಯ ಎಂದು ಎಚ್ಚರಿಸಿದ್ದಾರೆ.

ಈ ಅಧ್ಯಯನವು ಕೇವಲ ಪರಿಸರದ ವಿಷಯವಲ್ಲ, ಇದು ಮಾನವನ ಭವಿಷ್ಯದ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ  ವಿಷಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದು ಮತ್ತು ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಡಲತೀರಗಳ ಸೌಂದರ್ಯ ಜನತೆ ಕೇವಲ ನೆನಪುಗಳಲ್ಲಿ ಕಾಣಬೇಕಾಗುತ್ತದೆ.

Related Posts

Leave a Reply

Your email address will not be published. Required fields are marked *