Menu

ಪೊಲೀಸರು ಡೀಲ್, ಅಪರಾಧಗಳಲ್ಲಿ ಭಾಗಿಯಾದ್ರೆ ನಿರ್ದಾಕ್ಷಿಣ್ಯ ಕ್ರಮವೆಂದ ಸಿಎಂ 

ಯಾವುದೇ ಪೊಲೀಸ್ ಅಧಿಕಾರಿಗಳು ಡೀಲ್ ಗಳು ಹಾಗೂ ಅಪರಾಧಗಳಲ್ಲಿ ಭಾಗಿಯಾಗಬಾರದು. ಇಂತಹ ವಿಚಾರದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಮನವಿ ಎಂದಾದರೂ ಭಾವಿಸಿ, ಸೂಚನೆ ಎಂದಾದರೂ ಭಾವಿಸಿ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ವಿಧಾನಸೌಧದ ಆವರಣದಲ್ಲಿ ನಡೆದ ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್ ಗಳು ಹಾಗೂ 75 ಬೊಲೆರೋ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಪೊಲೀಸ್ ಇಲಾಖೆಗೆ ಹೊಸ ಶಕ್ತಿ ತುಂಬಲಾಗುತ್ತಿದೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ನಿಮಗೆ ಸರ್ಕಾರದ ಪರವಾಗಿ ಅಭಿನಂದನೆಗಳು. ಸಾಧನೆ ಸಾಮರ್ಥ್ಯಕ್ಕಿಂತ ನಿಮ್ಮ ಗುರಿ ನಿರ್ಧಾರ ಮಾಡಿದಾಗ ಜಯ ನಿಮ್ಮದಾಗಲಿದೆ ಎಂದರು.

ನಮ್ಮ ಪೊಲೀಸರು ಒಂದು ವರ್ಷದಲ್ಲಿ 375 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು 1500 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಇದು ದೊಡ್ಡ ದಾಖಲೆ. ಇಡೀ ದೇಶ ಕರ್ನಾಟಕವನ್ನು ಗಮನಿಸುತ್ತಿದೆ. ಡ್ರಗ್ಸ್ ಜಾಲವನ್ನು ಬೇಧಿಸಿದ ತಂಡಕ್ಕೆ ಸರ್ಕಾರ 10 ಲಕ್ಷದ ನಗದು ಬಹುಮಾನ ನೀಡಲು ತೀರ್ಮಾನಿಸಿದೆ. ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಯೊಬ್ಬ ನಾಗರಿಕನೂ ಇಲಾಖೆ ಮೇಲೆ ಗೌರವ ಇಟ್ಟುಕೊಳ್ಳುವಂತೆ ಕೆಲಸ ಮಾಡಬೇಕು. ನಿಮ್ಮ ಯಶಸ್ಸೇ ಸರ್ಕಾರದ ಯಶಸ್ಸು ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೇರಳ ಗೃಹಸಚಿವರಾದ ರಮೇಶ್ ಚೆನ್ನಿತ್ತಾಲ ಅವರು ನನ್ನ ಭೇಟಿ ಮಾಡಿ ಕರ್ನಾಟಕ ಗಡಿ ದಾಟಿ ಯಾವುದೇ ಮಾದಕ ವಸ್ತು ಕೇರಳ ಗಡಿ ಮೂಲಕ ಹೋಗಬಾರದು ಎಂಬ ವಿಚಾರವಾಗಿ ಕೆಲವು ಮಾಹಿತಿ ಹಾಗೂ ಮನವಿ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಮಾದಕ ವಸ್ತು ಬರದಂತೆ ತಡೆಯಲಾಗುವುದು ಎಂದು ಅವರಿಗೆ ಆಶ್ವಾಸನೆ ನೀಡಿದ್ದೇನೆ ಎಂದು ತಿಳಿಸಿದರು.

ನಮ್ಮ ಪೊಲೀಸ್ ಇಲಾಖೆಗೆ ದೇಶದಲ್ಲೇ ದಕ್ಷ ಇಲಾಖೆ ಎಂದು ಹೆಸರು ಪಡೆದಿದೆ. ಪೊಲೀಸ್ ಸಿಬ್ಬಂದಿಗಳ ಪರಿಶ್ರಮ, ನಿಷ್ಠೆ, ಕಾರ್ಯಕ್ಷಮತೆಯಿಂದ ಈ ಹೆಸರು ಬಂದಿದೆ. ಹಗಲು ರಾತ್ರಿ ನಿಮ್ಮ ಸೇವೆಗೆ ಸರ್ಕಾರ ನಿಮ್ಮ ಪರವಾಗಿ ನಿಲ್ಲಲಿದೆ. ಕೆಲವು ಸಂದರ್ಭದಲ್ಲಿ ಅನಾಹುತಗಳು ಆಗುತ್ತವೆ. ಅಂತಹ ಪರಿಸ್ಥಿತಿಯಲ್ಲೂ ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಆತ್ಮಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಲಾಗಿದೆ. ಕಾನೂನು ಕಾಯುತ್ತೀರಿ, ಸಮಾಜದ ಹಿತ ಕಾಪಾಡುತ್ತೀರಿ. ಅಪರಾಧಗಳಲ್ಲಿ ವಿವಿಧ ರೂಪಗಳಿವೆ. ತಂತ್ರಜ್ಞಾನ, ಎಐ ಬಂದ ಬಳಿಕ ಅಪರಾಧ ಪತ್ತೆಹಚ್ಚಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಗೂಂಡಾಗಿರಿ ತಡೆಗಟ್ಟಲು, ಎಲ್ಲಾ ಠಾಣೆಗಳಲ್ಲಿ ಪಡೆ ರಚಿಸಲು ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಹೇಳಿದರು.

ದೇವಾಲಯಗಳ ಹುಂಡಿ ರಕ್ಷಣೆಗೆ ತೀರ್ಮಾನ

ರಾಮಮಂದಿರದಲ್ಲಿ ಯಾವ ರೀತಿ ಕಳ್ಳತನವಾಗಿದೆ ಎಂದು ಗಮನಿಸಿದ್ದೀರಿ. ನಮ್ಮ ರಾಜ್ಯದಲ್ಲಿ ಮುಂಜಾಗ್ರತೆಯಿಂದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಸ್ಥಳೀಯ ಮುಖಂಡರು, ಪೊಲೀಸ್ ಅಧಿಕಾರಿಗಳು ಸೇರಿ ಹುಂಡಿ ತೆಗೆಯುವುದರಿಂದ, ಹಣ ಏಣಿಕೆ ಮಾಡುವುದು ಸೇರಿ ಅವುಗಳನ್ನು ಬ್ಯಾಂಕಿಗೆ ಸಲ್ಲಿಸುವವರೆಗೂ ಎಲ್ಲವನ್ನು ವಿಡಿಯೋ ದಾಖಲಾತಿ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ್ದೇನೆ. ಇದರ ಬಗ್ಗೆ ಬೆಳಗಾವಿಯಲ್ಲಿ ಘೋಷಣೆ ಮಾಡಲಾಗಿದೆ. ಸಧ್ಯದಲ್ಲೇ ಆದೇಶ ಹೊರಡಿಸಲಾಗುವುದು. ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾಗಿರುವುದು ಮುಖ್ಯ. ಯಾವುದೇ ಧರ್ಮದ ದೇವಾಲಯವಿದ್ದರೂ ಸರ್ಕಾರದ ವ್ಯಾಪ್ತಿಯಲ್ಲಿದ್ದರೆ ಅವುಗಳ ರಕ್ಷಣೆ ನಮ್ಮ ಕರ್ತವ್ಯವಾಗಲಿದೆ. ಅಪರಾಧವಾದ ಬಳಿಕ ಹುಡುಕುವುದಕ್ಕಿಂತ ಅಪರಾಧ ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ತೀರ್ಮಾನ ನೋಡಿ, ಖಾಸಗಿ ದೇವಾಲಯ ಹಾಗೂ ಮಠ ಮಾನ್ಯಗಳು ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಲಂಚ ಕೊಟ್ಟು ಪೊಲೀಸ್ ಇಲಾಖೆ ಸೇರುವಂತಿಲ್ಲ

ಪ್ರಿಯಾಂಕ್ ಖರ್ಗೆ ಅವರು ಈ ಇಲಾಖೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಕಳೆದ ಸರ್ಕಾರದ ಅವಧಿಯಲ್ಲಿ ಪಿಎಸ್ಐ ಹಗರಣವನ್ನು ತಮ್ಮದೇ ಆದ ರೀತಿ ತನಿಖೆ ಮಾಡಿ ಸರ್ಕಾರ ಹಾಗೂ ಜನರ ಗಮನ ಸೆಳೆದಿದ್ದರು. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು, ಯಾರೊಬ್ಬರೂ ಲಂಚ ಕೊಟ್ಟು ಕೆಲಸಕ್ಕೆ ಸೇರಬಾರದು. ಅರ್ಹತೆಯೇ ಹುದ್ದೆಯ ನೇಮಕಾತಿಗೆ ಮುಖ್ಯ ಮಾನದಂಡ ಎಂಬ ಅಡಿಪಾಯ ಹಾಕಿದ್ದಾರೆ. ಸರ್ಕಾರ ನಿಮ್ಮ ಜೊತೆ ಇರುತ್ತದೆ. ನೀವು ನಿಮ್ಮ ಕರ್ತವ್ಯನ್ನು ಸರಿಯಾಗಿ ನಿಭಾಯಿಸಿ ಎಂದು ಕಿವಿಮಾತು ಹೇಳಿದರು.

Related Posts

Leave a Reply

Your email address will not be published. Required fields are marked *