ಅಮೆರಿಕವು ತನ್ನ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್ ಮತ್ತು ಕುವೈತ್ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ 85 ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆಸಿದ್ದಾಗಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.
ಒಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಅಪಾಯಕಾರಿಯಾಗಿ ಪರಿಣಮಿಸಿದೆ. ದಾಳಿ ವೇಳೆ ಅಡ್ಡಿಪಡಿಸಲು ಬಂದ ಅಮೆರಿಕದ ಅತ್ಯಾಧುನಿಕ MQ-9 ರೀಪರ್ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಇಆ=ರಾನ್ ತಿಳಿಸಿದೆ. ಅಮೆರಿಕವು ಇರಾನ್ನ 80 ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿ, ತೈಲ ರಫ್ತು ಪರವಾನಗಿ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಪ್ರತೀಕಾರದ ದಾಳಿ ನಡೆದಿದೆ.
ಇರಾನ್ ಬಹ್ರೇನ್ನಲ್ಲಿರುವ ಅಮೆರಿಕದ ಐದನೇ ನೌಕಾ ಜಿಲ್ಲೆ, ಬಂದರ್ ಸಲ್ಮಾನ್ ಮತ್ತು ಶೇಖ್ ಈಸಾ ವಾಯುನೆಲೆಯನ್ನು ಗುರಿಯಾಗಿಸಿ ದಾಳಿ ಮಾಡಿದೆ. ಕುವೈತ್ನಲ್ಲಿರುವ ಅಮೆರಿಕದ ಅಲಿ ಅಲ್ ಸೇಲಂ ವಾಯುನೆಲೆಯ ಮೇಲೂಡ್ರೋನ್ಗಳು ಅಪ್ಪಳಿಸಿವೆ. ಕುವೈತ್ ಸೇನೆಯು ಶತ್ರು ಕ್ಷಿಪಣಿಗಳನ್ನು ತಡೆಯಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದೆ.
ಜೂನ್ ತಿಂಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡಲು ಮಧ್ಯಂತರ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇರಾನ್ಗೆ ಆಗಸ್ಟ್ 21 ರವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟ ಮಾಡಲು ಅಮೆರಿಕ ವಿಶೇಷ ವಿನಾಯಿತಿ ನೀಡಿತ್ತು.
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ತೈಲ ಟ್ಯಾಂಕರ್ಗಳ ಮೇಲೆ ದಾಳಿ ಮಾಡಿದ ತಕ್ಷಣ ಅಮೆರಿಕ ಸರ್ಕಾರ, ಇರಾನ್ನ ತೈಲ ಮಾರಾಟ ಪರವಾನಗಿ ರದ್ದುಗೊಳಿಸಿ ವಹಿವಾಟು ನಿಲ್ಲಿಸಲು ಇರಾನ್ಗೆ ಜುಲೈ 17 ರವರೆಗೆ ಗಡುವು ನೀಡಿದೆ. ಇರಾನ್ನ ಮುಖ್ಯ ತೈಲ ಕೇಂದ್ರವಾದ ಖಾರ್ಗ್ ದ್ವೀಪ, ಕೆಶ್ಮ್ ದ್ವೀಪ, ಬಂದರ್ ಅಬ್ಬಾಸ್ ಮತ್ತು ಸಿರಿಕ್ ನಗರಗಳ ಮೇಲೆ ಅಮೆರಿಕ ಯುದ್ಧ ವಿಮಾನಗಳು ಬಾಂಬ್ ದಾಳಿ ಮಾಡಿವೆ.
ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ಗಳು, ಕ್ಷಿಪಣಿ ಬ್ಯಾಟರಿಗಳು ಮತ್ತು ಡ್ರೋನ್ ಉಡಾವಣಾ ಕೇಂದ್ರಗಳು, ಯುದ್ಧ ದೋಣಿಗಳನ್ನು ಅಮೆರಿಕ ಧ್ವಂಸಗೊಳಿಸಿದೆ. ಅಮೆರಿಕದ ದಾಳಿಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಖಂಡಿಸಿ, ಬೆದರಿಕೆ ಮತ್ತು ಸುಲಿಗೆಯ ಯುಗ ಮುಗಿದಿದೆ. ನಾವು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಮತ್ತು ದೇಶದ ಹಿತಾಸಕ್ತಿ ರಕ್ಷಿಸಲು ಕಠಿಣ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಎಚ್ಚರಿಸಿದ್ದರು. ಹರ್ಮುಜ್ ಜಲಸಂಧಿಯ ನಿಯಂತ್ರಣದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ.
2026 ರ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ದಾಳಿಯೊಂದಿಗೆ ಯುದ್ಧ ಆರಂಭವಾಗಿದೆ. ಈಗ ಕತಾರ್ನಲ್ಲಿ ನಡೆಯುತ್ತಿದ್ದ ಶಾಂತಿ ಮಾತುಕತೆ ಮುರಿದುಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಒಪ್ಪಂದಕ್ಕೆ ಬಾರದಿದ್ದರೆ ಆ ದೇಶವನ್ನೇ ಮುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


