Menu

ಡಿಜಿಟಲ್ ಯುಗದಲ್ಲಿ ಯಾಕೆ ಹೆಚ್ಚುತ್ತಿದೆ ಬಂಜೆತನ

ಇಂದಿನ ಡಿಜಿಟಲ್ ಯುಗದಲ್ಲಿ ಸಾಫ್ಟ್‌ ವೇರ್ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಉದ್ಯೋಗಿಗಳನ್ನು  ಗಂಭೀರ ಆರೋಗ್ಯ ಸಮಸ್ಯೆ ಕಾಡತೊಡಗಿದೆ. ಕಂಪ್ಯೂಟರ್, ಲ್ಯಾಪ್‌ ಟಾಪ್ ಹಾಗೂ ಸ್ಮಾರ್ಟ್‌ ಫೋನ್‌ ಗಳ ಅತಿಬಳಕೆ ಐಟಿ ಉದ್ಯೋಗಿಗಳಲ್ಲಿ ಸಂತಾನಹೀನತೆ ಅಥವಾ ಬಂಜೆತನದ ಸಮಸ್ಯೆಯನ್ನು ತಂದೊಡ್ಡುತ್ತಿರುವುದು ಬೆಳಕಿಗೆ ಬಂದಿದೆ.

ಬಹುತೇಕ ಐಟಿ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯ ಬಹುಪಾಲು ಸಮಯವನ್ನು ಕಂಪ್ಯೂಟರ್ ಪರದೆಯ ಮುಂಭಾಗದಲ್ಲೇ ಕಳೆಯಬೇಕಾದ ಅನಿವಾರ್ಯತೆ ಇದೆ. ಕಚೇರಿಯ ಅವಧಿಯಲ್ಲೇ ಇವರ ಸ್ಕ್ರೀನ್ ಸಮಯ ಸರಾಸರಿ 6.5 ಗಂಟೆಗಳನ್ನೂ ಮೀರುತ್ತಿದೆ. ಕಚೇರಿ ಕೆಲಸ ಮುಗಿದ ನಂತರವೂ ವೈಯಕ್ತಿಕ ಮೊಬೈಲ್, ಟ್ಯಾಬ್ಲೆಟ್ ಹಾಗೂ ಟಿವಿ ವೀಕ್ಷಣೆ ಸೇರಿ ಇವರ ದೈನಂದಿನ ಒಟ್ಟಾರೆ ಸ್ಕ್ರೀನ್ ಸಮಯ ಅಪಾಯಕಾರಿ ಮಟ್ಟವ ತಲುಪುತ್ತಿದೆ. ಡಿಜಿಟಲ್ ಪರದೆಗಳ  ಅತಿಯಾದ ಅವಲಂಬನೆ ಯುವ ಪೀಳಿಗೆಯ ವೈವಾಹಿಕ ಜೀವನದ ನೆಮ್ಮದಿಯನ್ನೇ ಕೆಡಿಸುತ್ತಿದೆ ಎನ್ನುತ್ತಾರೆ  ಒಯಸಿಸ್‌ ಫರ್ಟಿಲಿಟಿ ಸ್ಪೆಷಲಿಸ್ಟ್‌ ಡಾ. ಚಿನ್ಮಯಿ.

ಅತಿಯಾದ ಸ್ಕ್ರೀನ್ ಸಮಯವು ಪುರುಷರು ಮತ್ತು ಮಹಿಳೆಯರಿಬ್ಬರ ಮೇಲೂ ವಿಭಿನ್ನ ಜೈವಿಕ ಪ್ರಕ್ರಿಯೆಗಳ ಮೂಲಕ ತೀವ್ರ ಪರಿಣಾಮ ಬೀರುತ್ತಿದೆ. ಡಿಜಿಟಲ್ ಸಾಧನಗಳಿಂದ ಹೊರಹೊಮ್ಮುವ ಬ್ಲೂ ಲೈಟ್ ದೇಹದ ಮೇಲೆ  ಕೆಟ್ಟ ಪರಿಣಾಮ ಬೀರುತ್ತದೆ.  ತಡರಾತ್ರಿಯವರೆಗೂ ಮೊಬೈಲ್ ಅಥವಾ ಲ್ಯಾಪ್‌ ಟಾಪ್ ಬಳಸುವುದರಿಂದ ದೇಹದ ನೈಸರ್ಗಿಕ ಜೈವಿಕ ಗಡಿಯಾರದ ಸಮತೋಲನ ಸಂಪೂರ್ಣ ತಪ್ಪುತ್ತದೆ.  ಗಾಢ ನಿದ್ರೆಗೆ ಜಾರಲು ನೆರವಾಗುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ದೇಹದಲ್ಲಿ ಕುಂಠಿತಗೊಳ್ಳುತ್ತದೆ. ಇದು ಸ್ತ್ರೀ-ಪುರುಷರ ಸಂತಾನೋತ್ಪತ್ತಿ ಹಾರ್ಮೋನ್‌ ಗಳ ಏರುಪೇರಿಗೆ ಕಾರಣವಾಗುತ್ತಿದೆ. ಯುವ ಉದ್ಯೋಗಿಗಳಲ್ಲಿ ಬಂಜೆತನದ ಸಮಸ್ಯೆಯನ್ನು ತೀವ್ರಗೊಳಿಸುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಸಂಶೋಧನೆಗಳ ಪ್ರಕಾರ, ರಾತ್ರಿ ಸ್ಮಾರ್ಟ್‌ ಫೋನ್ ಮತ್ತು ಟ್ಯಾಬ್ಲೆಟ್‌ ಗಳ ಅತಿ ಬಳಕೆ ಪುರುಷರಲ್ಲಿ ವೀರ್ಯಾಣುಗಳ ಸಾಂದ್ರತೆ ಮತ್ತು ಚಲನಶೀಲತೆ ಕುಂಠಿತಗೊಳಿಸುತ್ತದೆ. ಉತ್ತಮ ನಿದ್ರೆಯು ಆರೋಗ್ಯಕರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಪೂರಕವಾಗಿದೆ. ದೀರ್ಘಕಾಲದವರೆಗೆ ಲ್ಯಾಪ್‌ ಟಾಪ್‌ ಗಳನ್ನು ನೇರವಾಗಿ ಮಡಿಲ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ವೃಷಣಗಳ ತಾಪಮಾನ ಹೆಚ್ಚಾಗುತ್ತದೆ,  ವೀರ್ಯಾಣುಗಳ ಉತ್ಪಾದನೆಯ ಮೇಲೆ  ಕೆಟ್ಟ ಪರಿಣಾಮ ಬೀರುತ್ತದೆ.  ಶಿಫ್ಟ್ ಆಧಾರಿತ ಕೆಲಸಗಳು, ಅನಿಯಮಿತ ದಿನಚರಿ ಮತ್ತು ನಿದ್ರಾಹೀನತೆಯು ಈ ಸಮಸ್ಯೆಯನ್ನು ಉಲ್ಬಣಗೊಳಿಸಿ, ಸ್ತ್ರೀ-ಪುರುಷರಿಬ್ಬರಲ್ಲೂ ಸಂತಾನೋತ್ಪತ್ತಿ ಚಕ್ರದ ಏರುಪೇರಿಗೆ ಕಾರಣವಾಗುತ್ತದೆ.

ದೀರ್ಘಾವಧಿಯ ಜಡ ಜೀವನಶೈಲಿಯು ದೇಹದ ಚಯಾಪಚಯ ಕ್ರಿಯೆ ಮತ್ತು ಹಾರ್ಮೋನ್‌ ಗಳ ನಿಯಂತ್ರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ದೈಹಿಕ ಚಟುವಟಿಕೆಗಳು ತೀರಾ ಕಡಿಮೆ ಇರುವ ಮಹಿಳೆಯರಲ್ಲಿ ಈ ಅಪಾಯ ಹೆಚ್ಚು ಎಂದು ಸಂಶೋಧನೆಗಳು ಎಚ್ಚರಿಸಿವೆ.

ಹೆಚ್ಚಿನ ಒತ್ತಡವಿರುವ ಇಂದಿನ ಕೆಲಸದ ವಾತಾವರಣವು ದೇಹದಲ್ಲಿ ಕಾರ್ಟಿಸಾಲ್ (ಮಾನಸಿಕ ಒತ್ತಡದ ಹಾರ್ಮೋನ್) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಹಜ ಹಾರ್ಮೋನ್‌ ಗಳ ಉತ್ಪಾದನೆಗೆ ಅಡ್ಡಿಪಡಿಸಿ, ಹತ್ತಾರು ಆರೋಗ್ಯ ಸವಾಲುಗಳಿಗೆ ದಾರಿ ಮಾಡಿಕೊಡುತ್ತದೆ. ಕಿರಿದಾದ ಕಚೇರಿ ಸ್ಥಳಗಳು ಮತ್ತು ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯು ದೈಹಿಕ ನಿಷ್ಕ್ರಿಯತೆ ಹೆಚ್ಚಿಸುತ್ತಿರುವುದಲ್ಲದೆ, ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ನಡುವಿನ ಗೆರೆಯನ್ನು ಅಳಿಸಿಹಾಕುತ್ತಿದೆ.

ದೀರ್ಘಾವಧಿಯ ಕೆಲಸದ ಸಮಯ ಮತ್ತು ಸದಾ ಡಿಜಿಟಲ್ ಸಂಪರ್ಕದಲ್ಲಿರುವುದು ದಂಪತಿಗಳು ಪರಸ್ಪರ ಕಳೆಯುವ ಸಮಯವನ್ನು ಕಸಿದುಕೊಳ್ಳುತ್ತದೆ. ಇದು ಅವರಲ್ಲಿ ದೈಹಿಕ ನಿಕಟತೆ ಕಡಿಮೆಯಾಗಲು ಕಾರಣವಾದರೆ, ಕೆಲಸದ ದೀರ್ಘಕಾಲದ ಒತ್ತಡವು ವೈಯಕ್ತಿಕ ಸಂಬಂಧಗಳ ಮೇಲೂ ಪರಿಣಾಮ ಬೀರಿ, ಪರಸ್ಪರ ಸಂವಹನ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಕುಂಠಿತಗೊಳಿಸುತ್ತದೆ.

ವಿಶೇಷವಾಗಿ ನಗರ ಪ್ರದೇಶದ ವೃತ್ತಿಪರರಲ್ಲಿ ತಡವಾಗಿ ಮದುವೆಯಾಗುವುದು ಮತ್ತು ತಡವಾಗಿ ಮಕ್ಕಳನ್ನು ಹೆರುವ ಪ್ರವೃತ್ತಿ ಹೆಚ್ಚಾಗುತ್ತಿದೆ.  ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಸಂಸ್ಕರಿಸಿದ ಆಹಾರಗಳ ಮೇಲಿನ ಅತಿಅವಲಂಬನೆ , ಧೂಮಪಾನ ಮತ್ತು ಮದ್ಯಪಾನ ಈ ಎಲ್ಲಾ ಅಪಾಯಗಳು ಒಂದೇ ಕಡೆ ಒಟ್ಟಾಗುವುದರಿಂದ ಐಟಿ ವೃತ್ತಿಪರರು ಈ ಆರೋಗ್ಯ ಸಮಸ್ಯೆಗಳಿಗೆ  ಸುಲಭವಾಗಿ ತುತ್ತಾಗುತ್ತಾರೆ.

ದೈನಂದಿನ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಬಹುತೇಕ ಅಪಾಯಗಳನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ.  ಮಲಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿಯೇ ಮೊಬೈಲ್, ಲ್ಯಾಪ್‌ ಟಾಪ್ ಬಳಕೆಯನ್ನು ನಿಲ್ಲಿಸಿ.  ಲ್ಯಾಪ್‌ ಟಾಪ್‌ಗಳನ್ನು ಮಡಿಲ ಮೇಲೆ ಇಟ್ಟುಕೊಳ್ಳಬೇಡಿ, ಕೆಲಸ ಮಾಡುವಾಗ ಯಾವಾಗಲೂ ಮೇಜು ಅಥವಾ ಕೂಲಿಂಗ್ ಪ್ಯಾಡ್‌ ಗಳನ್ನು ಬಳಸಿ.  ದೈಹಿಕವಾಗಿ ಸಕ್ರಿಯರಾಗಿರಿ,  ದೈನಂದಿನ ದಿನಚರಿಯಲ್ಲಿ ಸಣ್ಣ ವಿರಾಮಗಳು ಮತ್ತು ದೈಹಿಕ ಚಲನವಲನಗಳಿಗೆ ಆದ್ಯತೆ ನೀಡಿ.  ನಿದ್ರೆಯ ಸಮಯವನ್ನು ಸರಿಪಡಿಸಿ,  ನಿದ್ರೆಯ ವೇಳಾಪಟ್ಟಿಯನ್ನು ಸ್ಥಿರವಾಗಿಟ್ಟುಕೊಳ್ಳಿ.

ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಿ,  ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಿ ಹಾಗೂ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಮಾನಸಿಕ ಒತ್ತಡವನ್ನು ನಿರ್ವಹಿಸಲು ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿ ಪಡೆಯುವ ಸಮಯವನ್ನು ಕಂಡುಕೊಳ್ಳಿ.

ಡಿಜಿಟಲ್ ಯುಗದಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುವುದು ಎಂದರೆ  ಜೀವನದಲ್ಲಿ ಸರಿಯಾದ ಸಮತೋಲನ ಕಂಡುಕೊಳ್ಳುವುದಾಗಿದೆ.  ತಂತ್ರಜ್ಞಾನದಿಂದ ಕೊಂಚ ದೂರ ಸರಿದು ಮನಸ್ಸನ್ನು ಹಗುರಗೊಳಿಸಿಕೊಳ್ಳುವ ಕ್ಷಣಗಳನ್ನು ಸೃಷ್ಟಿಸಿಕೊಳ್ಳುವುದು ಇಂದಿನ ಅಗತ್ಯ. ಇಂತಹ ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನವು ವೃತ್ತಿಪರ ಯಶಸ್ಸಿಗೆ ಮಾತ್ರವಲ್ಲ, ನಮ್ಮ ದೀರ್ಘಕಾಲೀನ ಆರೋಗ್ಯ ಮತ್ತು ಭವಿಷ್ಯದ ಕನಸುಗಳನ್ನು ರಕ್ಷಿಸಿಕೊಳ್ಳಲು ಇರುವ  ಕೀಲಿ ಕೈ.

Related Posts

Leave a Reply

Your email address will not be published. Required fields are marked *