ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾರ್ಟಿ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಯುವಕರುಯುವತಿಗೆ ಮೊದಲೇ ಪರಿಚಯವಿದ್ದರು ಎನ್ನಲಾಗಿದೆ. ಸೋಮಶೇಖರ್ ಎಂಬಾತ, ಕಲಬುರ್ಗಿಯಿಂದ ನಮ್ಮ ಸ್ನೇಹಿತರು ಬಂದಿದ್ದಾರೆ ಎಂದು ಹೇಳಿ ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡಿದ್ದಾನೆ.
ದೇವನಹಳ್ಳಿ ಭಾಗದಲ್ಲಿ ವಾಸವಿದ್ದ ಯುವ, ಸ್ನೇಹಿತನ ಮಾತನ್ನು ನಂಬಿ ಸಂಜೆ ಆರೋಪಿಗಳು ಪಾರ್ಟಿ ಮಾಡುತ್ತಿದ್ದ ಜಾಗಕ್ಕೆ ತೆರಳಿದ್ದಾಳೆ. ಆರೋಪಿಗಳಲ್ಲೊಬ್ಬನಾದ ಅಂಬರೀಶ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಹೇಗೋ ಧೈರ್ಯ ಮಾಡಿ ಐವರ ಗುಂಪಿನಿಂದ ತಪ್ಪಿಸಿಕೊಂಡು ಬಂದು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕರೆ ಬಂದ ತಕ್ಷಣವೇ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸೋಮಶೇಖರ್, ಅಂಬರೀಶ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ.


