ಮಾಗಡಿ ಮುಖ್ಯರಸ್ತೆಯ ಅಂಜನಾನಗರ ಸಮೀಪದ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನವೀನ್ ಎಂಬಾತನ ಪತ್ನಿ ತನುಜಾ ಮೃತ ಮಹಿಳೆಯಾಗಿದ್ದು, ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದರು.
ತನುಜಾ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ತನುಜಾ-ನವೀನ್‌ಗೆ ಎರಡೂವರೆ ವರ್ಷದ ಹೆಣ್ಣು ಮಗು ಇದೆ. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಬ್ಯಾಟ್‌ನಿಂದ ಹೊಡೆದು ಪಿಜಿ ಮಾಲೀಕನ ಕೊಲೆಗೈದ ವಿದ್ಯಾರ್ಥಿಗಳು
ಬೆಂಗಳೂರಿನ ಕಸ್ತೂರಿನಗರ ಮುಖ್ಯ ರಸ್ತೆಯ ಬಳಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬ್ಯಾಟ್‌ನಿಂದ ಹಲ್ಲೆ ನಡೆಸಿ ಪಿಜಿ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಮಾಧವ್ ಮಟ್ಲೆ (37) ಕೊಲೆಯಾದ ಪಿಜಿ ಮಾಲೀಕ, ಆರೋಪಿಗಳು ತಮ್ಮ ಪಿಜಿ ಆವರಣದೊಳಗೆ ಕಾಲು ತೊಳೆಯುವುದಕ್ಕೆ ಮಾಲೀಕ ಆಕ್ಷೇಪಿಸಿದ್ದಕ್ಕೆ ವಿದ್ಯಾರ್ಥಿಗಳಾದ ರಾಕೇಶ್ ಮತ್ತು ಡಾನ್ ಬ್ರೈಟ್ ಸನ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ವಿದ್ಯಾರ್ಥಿಗಳು ಆ ಪಿಜಿ ವಾಸಿಗಳು ಅಲ್ಲ, ಘಟನೆ ನಡೆದ ಸಮಯದಲ್ಲಿಮದ್ಯದ ಅಮಲಿನಲ್ಲಿದ್ದರೆಂದು ಹೇಳಲಾಗಿದೆ, ಕಾಲು ತೊಳೆಯುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿ ಮಟ್ಲೆ ಹೊಡೆಯಲು ಬ್ಯಾಟ್ ತಂದಿದ್ದರು, ಆರೋಪಿಗಳು ಅದನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.


