Menu

ಲಿವ್ ಇನ್ ರಿಲೇಷನ್‌ಶಿಪ್‌ ಬೇಡ: ಬುದ್ಧಿ ಹೇಳಿದ ತಂದೆ, ತಾಯಿ, ತಂಗಿಯ ಕೊಲೆಗೈದ ಯುವತಿ

ಲಿವ್-ಇನ್ ರಿಲೇಷನ್‌ಶಿಪ್‌ಗೆ  ವಿರೋಧ ವ್ಯಕ್ತಪಡಿಸಿ, ಬುದ್ಧಿ ಹೇಳಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ತಂದೆ, ತಾಯಿ, ತಂಗಿಯನ್ನು ಪ್ರಿಯಕರನೊಂದಿಗೆ ಸೇರಿ ಯುವತಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಕೆಆರ್ ಪುರದ ಸಿಗೇಹಳ್ಳಿಯಲ್ಲಿ ನಡೆದಿದೆ.

ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಮಗಳು ಸುಪ್ರಿಯಾ (20) ಕೊಲೆಯಾದವರು. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಪ್ರಿಯಕರ ಕೆನತ್ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳು.

ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮಗಳ ಈ ನಡವಳಿಕೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಪೋಷಕರು ಹಾಗೂ ಶ್ವೇತಾ-ಕೆನತ್ ನಡುವೆ ಗಲಾಟೆ ನಡೆದಿದೆ. ಗಲಾಟೆ ತೀವ್ರಗೊಂಡು ಮಗಳು ಮತ್ತು ಪ್ರಿಯಕರ ಸೇರಿ ತಂದೆ, ತಾಯಿ ಹಾಗೂ ತಂಗಿಗೆ ಚಾಕುವಿನಿಂದ ಇರಿದಿದ್ದಾರೆ. ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯ ಒಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಹೇಗೋ ಮನೆಯಿಂದ ಹೊರಗೆ ಬಂದು ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳೀಯರು ‘112’ ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೊಯ್ಸಳ ಸಿಬ್ಬಂದಿ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಅವರು ಪೊಲೀಸರಿಗೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ದೊಡ್ಡ ಮಗಳು ಶ್ವೇತಾ ಬಾಯ್ ಫ್ರೆಂಡ್ ಜೊತೆ ಲಿವಿಂಗ್‌ನಲ್ಲಿದ್ದಳು. ಇದು ಸರಿಯಲ್ಲ ಎಂದು ಬುದ್ಧಿ ಹೇಳಲು ಬಂದಿದ್ದೆವು. ಮಗಳು ಮತ್ತು ಬಾಯ್ ಫ್ರೆಂಡ್ ನಮ್ಮ ಮೇಲೆ ಚಾಕುವಿನಿಂದ ಇರಿದರು. ಹೆಂಡತಿ ಮತ್ತು ಚಿಕ್ಕ ಮಗಳು ಮನೆ ಒಳಗಡೆಯೇ ಇದ್ದಾರೆ ಎಂದು ತಿಳಿಸಿದ್ದಾರೆ.

ಕೊಲೆ ಮಾಡಿ ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *