Menu

ನಕಲಿ ಪದವಿ ಅಂಕಪಟ್ಟಿ ಮಾರಾಟ ದಂಧೆ ಆರೋಪಿ ಅರೆಸ್ಟ್‌

ನಕಲಿ ಪದವಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನು ಮಾರುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ದಂಧೆಯ ಪ್ರಮುಖ ಸೂತ್ರಧಾರಿಗಳಾದ ಕಾರ್ತಿಕ್ ಹಾಗೂ ಆರ್ಯನ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.  ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹೆಸರಿನಲ್ಲಿ ನಕಲಿ ಕಚೇರಿ ತೆರೆದು ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುತ್ತಿದ್ದ ಫ್ಲಾರೆನ್ಸ್, ಕಲಾನಿಕೇತನ್, ಎಂವಿಜೆ ಹಾಗೂ ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಕಾಲೇಜಿಗೆ ಹೋಗಿ ಓದದೆ ಇದ್ದರೂ ನೇರವಾಗಿ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಕೊಡುತ್ತಿದ್ದನು.

ಆರೋಪಿ ರಾಜಾರೆಡ್ಡಿಯು ತಲೆಮರೆಸಿಕೊಂಡಿರುವ ಆರ್ಯನ್ ಹಾಗೂ ಕಾರ್ತಿಕ್ ಸಹಾಯದಿಂದ ಎಸ್‌ಎಸ್‌ಎಲ್‌ಸಿ , ಪಿಯುಸಿ ಹಾಗೂ ಪದವಿಗಳ ನಕಲಿ ಅಂಕಪಟ್ಟಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸುತ್ತಿದ್ದ. ಪ್ರತಿಯೊಂದಕ್ಕೆ 30,000 ದಿಂದ 50,000 ರೂ.ವರೆಗೆ ಮಾರಾಟ ಮಾಡುತ್ತಿದ್ದ. ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಹಣ ಪಡೆದು, ನಕಲಿ ಅಂಕಪಟ್ಟಿಗಳನ್ನು  ಮನೆ ವಿಳಾಸಕ್ಕೆ ಕೊರಿಯರ್ ಮೂಲಕ ತಲುಪಿಸುತ್ತಿದ್ದ.

ಈ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿಸಿಬಿ ಪೊಲೀಸರು ಕೋರಮಂಗಲದ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿದ್ದ 50ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಾರೆಡ್ಡಿಯನ್ನು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *