Menu

ಮೆಟ್ರೊ ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ ನೀಡಿ: ಕೇಂದ್ರ ಸಚಿವ ಖಟ್ಟರ್‌ಗೆ ಸಿಎಂ ಶಿವಕುಮಾರ್‌ ಪ್ರಸ್ತಾವನೆ

ಸಿಎಂ ಡಿಕೆ ಶಿವಕುಮಾರ್‌ ದೆಹಲಿಯಲ್ಲಿ  ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ  ರಾಜ್ಯದ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ  ಪ್ರಸ್ತಾವನೆ  ಸಲ್ಲಿಸಿದ್ದಾರೆ.

ಮೆಟ್ರೋ ಮೂರನೇ ಹಂತ ಯೋಜನೆಯಲ್ಲಿ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್ ಸಿಎಲ್ ಮುಂದಾಗಿದ್ದು, ದಿನಾಂಕ 13-09-2024ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿತ್ತು. ಈ ಯೋಜನೆಯ ವೆಚ್ಚ 9,700 ಕೋಟಿ ರೂ. ಅನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ. 19-01-2026ರಂದು ಬಿಎಂಆರ್ ಸಿಎಲ್ ಮಂಡಳಿಯ 118ನೇ ಸಭೆಯಲ್ಲಿ ಸಣ್ಣ ಬದಲಾವಣೆ ಪ್ರಸ್ತಾಪ ಮಾಡಿದ್ದು, ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಲು ಬಿಎಂಆರ್ ಸಿಎಲ್ ಗೆ ಅನುಮತಿ ನೀಡಬೇಕು ಎಂದು ಸಿಎಂ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನೆಗೆ ಕೇಂದ್ರ ಸರ್ಕಾರ 21-02-2014ರಂದು 26,405.14 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮತಿ ನೀಡಿತ್ತು. 72.095 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆ ಅಂದಾಜು ವೆಚ್ಚ ಈಗ 40,425.02 ಕೋಟಿ ರೂ.ಗೆ ಅಂದರೆ 14,019.88 ಕೋಟಿ ರೂ. ಏರಿಕೆ ಮಾಡಲಾಗಿದ್ದು, ಆದಷ್ಟು ಬೇಗ ಈ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದೂ ಪ್ರಸ್ತಾವನೆಯಲ್ಲಿ  ತಿಳಿಸಿದ್ದಾರೆ.

ಮೆಟ್ರೋ ಮೂರನೇ ಎ ಹಂತ  ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 37.804 ಕಿ.ಮೀ (14.28 ಕಿ.ಮೀ ಸುರಂಗ ಹಾಗೂ 23.524 ಕಿ.ಮೀ ಮೇಲ್ಸೇತುವೆ) ಉದ್ದವಿದ್ದು, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು ಮಾರ್ಪಾಡು ಮಾಡಲಾಗಿದ್ದು, 25,999 ಕೋಟಿ ರೂ. ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು 29-04-2026ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಆದಷ್ಟು ಬೇಗ ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆಯಡಿ ಬೆಂಗಳೂರು- ಮೈಸೂರು, ಬೆಂಗಳೂರು- ಕನಕಪುರ, ಬೆಂಗಳೂರು- ತುಮಕೂರು, ಬೆಂಗಳೂರು- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು- ಕೋಲಾರ ನಡುವೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಕೇಳಿದ್ದಾರೆ.

Related Posts

Leave a Reply

Your email address will not be published. Required fields are marked *