“ದೇವರಾಜ ಅರಸು ಅವರು ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ” ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜು ಅರಸು ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
“ದೇವರಾಜ ಅರಸು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ. ಅವರು ಯಾವ ಭಾವನೆಯೊಂದಿಗೆ ರಾಜಕಾರಣ, ಅಧಿಕಾರ ನಡೆಸಿದ್ದರು ಎಂದು ಅವರು ಹೇಳಿದ್ದರು. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅರಸು ಅವರ ನಾಯಕತ್ವದಲ್ಲಿ ಉಳುವವನಿಗೆ ಭೂಮಿ ನೀಡಬೇಕು ಎಂದು ತಂದ ಭೂ ಸುಧಾರಣಾ ಕಾಯ್ದೆ ದೇಶಕ್ಕೆ ಒಂದು ಮಾದರಿ. ಅದೊಂದು ಕ್ರಾಂತಿ. ಅರಸು ಅವರೊಬ್ಬ ಧೀಮಂತ ನಾಯಕ. ಅವರು ಎಲ್ಲಾ ಜನಾಂಗದವರನ್ನು ಬೆಳೆಸಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಸಲು ಅವರು ಕ್ರಮ ಕೈಗೊಂಡರು.” ಎಂದು ಸ್ಮರಿಸಿದರು.
“ಅಂದಿನ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ. ರೈತರು ಮಾತ್ರವಲ್ಲ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಕೊಡುಗೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಎಲ್ಲಾ ನಾಯಕರಿಗೆ ನಮನ ಅರ್ಪಿಸಿದ್ದೆ, ಇಂದು ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ” ಎಂದು ತಿಳಿಸಿದರು.


