Menu

ಜಲಸಂಪನ್ಮೂಲ ಬೇಡ, ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕೆಂದು ರಾಮಲಿಂಗಾರೆಡ್ಡಿ  ರಾಜೀನಾಮೆ

ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕು, ಜಲಸಂಪನ್ಮೂಲ ಇಲಾಖೆ ಬೇಡ ಎಂದು ಅಸಮಾಧಾನಗೊಂಡು ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ಕಚೇರಿಯಲ್ಲಿ ದ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, ಈಗಿನ ಮುಖ್ಯಮಂತ್ರಿಗಳು ಹಿಂದೆ ಅವರಾಗಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿಲ್ಲ. ಈ ವಿಚಾರ ಜನರಿಗೆ ತಿಳಿಯಬೇಕು ಎಂದು ಹೇಳಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಕಾಂಗ್ರೆಸ್ ಶಾಸಕನಾಗಿಯೇ ಮುಂದುವರಿಯುತ್ತೇನೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಯಾರ ಬಳಿಯೂ ಎಂದಿಗೂ ಮಂತ್ರಿ ಸ್ಥಾನಕ್ಕಾಗಿ ಭಿಕ್ಷೆ ಬೇಡಿಲ್ಲ, ಯಾರ ಮೇಲೂ ಕೋಪವಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕಷ್ಟೇ. ನಾನು 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ  ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಜೀವನದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸತತ 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವನಾಗಿದ್ದೆ.  ಸಿದ್ದರಾಮಯ್ಯ  ಸಂಪುಟದಲ್ಲಿ 2 ಬಾರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ನನಗೆ ನೀಡಲಾಗಿದ್ದ ಎಲ್ಲಾ ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿರುವೆ. ಯಾವುದೇ ಮುಖ್ಯಮಂತ್ರಿಗಳ ಬಳಿ ಹೋಗಿ ಮಂತ್ರಿ ಮಾಡಿ ಎಂದಾಗಲಿ ಅಥವಾ ಇಂತಹದ್ದೇ ಇಲಾಖೆ ಬೇಕು ಎಂದಾಗಲಿ ಕೇಳಿರಲಿಲ್ಲ. ಶಿವಕುಮಾರ್ ಬಳಿಯಾಗಲಿ ಅಥವಾ ಹೈಕಮಾಂಡ್ ಬಳಿಯಾಗಲಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ.  ಹಿಂದೆ ಡಿಕೆ ಶಿವಕುಮಾರ್, ನಾನು ಎರಡೂವರೆ ವರ್ಷಆದ ಮೇಲೆ ಮುಖ್ಯಮಂತ್ರಿಯಾಗುತ್ತೇನೆ, ಆಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು.  ಈಗ ನನಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

 

Related Posts

Leave a Reply

Your email address will not be published. Required fields are marked *