Menu

“ಜಿಬಿಎ ಚುನಾವಣೆ ಬೇಗ ನಡೆಸಿ, ವಿಳಂಬದಿಂದಾಗಿ ಕೇಂದ್ರದ ಹತ್ತು ಸಾವಿರ ಕೋಟಿ ರೂ. ಸಿಗ್ತಿಲ್ಲ”

ಚುನಾವಣೆ ವಿಳಂಬದಿಂದಾಗಿ ಬೆಂಗಳೂರಿಗೆ 10,000 ಕೋಟಿ ರೂ. ಕೇಂದ್ರದ ಹಣಕಾಸು ನೆರವು ಸಿಗುತ್ತಿಲ್ಲ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗಳನ್ನು ಆದಷ್ಟು ಬೇಗ ನಡೆಸುವಂತೆ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಮತ್ತು ಮಾಜಿ ಸಂಸತ್ ಸದಸ್ಯ ಡಾ. ಸಿ. ನಾರಾಯಣಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ (ಐಐಪಿಎ) ಕರ್ನಾಟಕ ಪ್ರಾದೇಶಿಕ ಶಾಖೆ ಆಯೋಜಿಸಿದ್ದ “ಸ್ಥಳೀಯ ಸಂಸ್ಥೆಗಳಿಗೆ ನಿಧಿಯ ವಿಕೇಂದ್ರೀಕರಣ – ಐದನೇ ಕರ್ನಾಟಕ ರಾಜ್ಯ ಹಣಕಾಸು ಆಯೋಗದ ವರದಿ” ಎಂಬ ವಿಷಯದ ಕುರಿತು ಭಾಷಣ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಜಿಬಿಎ ಚುನಾವಣೆ ವಿಚಾರಕ್ಕೆ ಆದ್ಯತೆ ನೀಡಿ ಕೇಂದ್ರದಿಂದ ಬರುವ ಅನುದಾನ ಪಡೆದುಕೊಳ್ಳಭೇಕು ಎಂದು ಮನವಿ ಮಾಡಿದರು. 1993 ರಲ್ಲಿ ಜಾರಿಗೆ ತರಲಾದ 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಗಳು ಸ್ಥಳೀಯ ಸಂಸ್ಥೆಗಳಿಗೆ ಸಬಲೀಕರಣ ಮತ್ತು ಅಧಿಕಾರದ ವಿಕೇಂದ್ರೀಕರಣದ ಹೊಸ ಯುಗಕ್ಕೆ ನಾಂದಿ ಹಾಡಿದವು ಎಂದು ಡಾ. ನಾರಾಯಣಸ್ವಾಮಿ ಹೇಳಿದರು.

15ನೇ ಹಣಕಾಸು ಆಯೋಗವು ನಿಗದಿಪಡಿಸಿದ ಷರತ್ತುಗಳನ್ನು ಪಾಲಿಸಲು ಕರ್ನಾಟಕ ವಿಫಲವಾದ ಕಾರಣ ಅನುದಾನಗಳನ್ನು ತಡೆಹಿಡಿಯಲಾಗಿದೆ, ಪರಿಣಾಮವಾಗಿ ಆರ್ಥಿಕ ಹಿನ್ನಡೆಯಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ ಎಂದರು.

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಜೂನ್​​ 30ರವರೆಗೆ ನೀಡಿದ್ದ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮನವಿಯಂತೆ ಕೋರ್ಟ್ ಈ ಕ್ರಮ ಕೈಗೊಂಡಿದೆ. ಇದೇ ಅಂತಿಮ ಅವಕಾಶ. ಮತ್ತಷ್ಟು ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠ ಈ ಬಗ್ಗೆ ಆದೇಶ ನೀಡಿದ್ದು, ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಗಡುವು ವಿಸ್ತರಣೆ ಕೋರಿ ಮನವಿ ಸಲ್ಲಿಸಿದ್ದರು.

ವಿಶೇಷ ಮತದಾರರ ಪರಿಶೀಲನೆ ಕಾರಣ ಸಿಬ್ಬಂದಿ ಸಮಸ್ಯೆ ಇದೆ. ಕನಿಷ್ಠ ಎರಡರಿಂದ ಮೂರು ತಿಂಗಳು ಅವಧಿ ವಿಸ್ತರಣೆ ಅಗತ್ಯ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ರಾಜ್ಯ ಚುನಾವಣಾ ಆಯೋಗವೂ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಕೋರ್ಟ್​​ ಈ ಹಿಂದೆ ನೀಡಿದ್ದ ಗಡುವು ವಿಸ್ತರಿಸುವಂತೆ ಕೋರಿ ಮನವಿ ಸಲ್ಲಿಸಿತ್ತು.

Related Posts

Leave a Reply

Your email address will not be published. Required fields are marked *