ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಇಂದು (ಜೂನ್ 3) ಸಂಜೆ 4 ಗಂಟೆ 5 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಸರ್ವ ಸಿದ್ಧತೆಗಳು ನಡೆದಿವೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸರಳವಾಗಿ, ಶಿಸ್ತುಬದ್ಧವಾಗಿ ಸಮಾರಂಭ ನೆರವೇರಲಿದ್ದು, ಬೆಂಗಳೂರಿನಾದ್ಯಂತ ಶಿವಕುಮಾರ್ ಅವರ ಕಟೌಟ್ ಹಾಗೂ ಬ್ಯಾನರ್‌ಗಳು ಕಂಗೊಳಿಸುತ್ತಿವೆ.
ಇದೇ ಮೊದಲ ಬಾರಿಗೆ ಪೂರ್ವಾಭಿಮುಖವಾಗಿ ಲೋಕಭವನದ ವೇದಿಕೆ ಸಜ್ಜುಗೊಂಡಿದೆ. ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು 55 ಪ್ರಮುಖ ಧರ್ಮಗುರುಗಳಿಗೆ ಆಹ್ವಾನ ನೀಡಲಾಗಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷವಾಗಿ ವಾಸ್ತು ಸ್ಪರ್ಶ ನೀಡಲಾಗಿದೆ. ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ವೇದಿಕೆ ಪಶ್ಚಿಮಾಭಿಮುಖವಾಗಿ ಇರುತ್ತಿತ್ತು. ಈ ಬಾರಿ ವೇದಿಕೆಯನ್ನು ಪೂರ್ವಾಭಿಮುಖವಾಗಿ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಹೊತ್ತುಕೊಂಡಿದ್ದು, ಪ್ರತಿಯೊಂದು ಸಿದ್ಧತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಶ್ರೀಗಳು, ತರಳುಬಾಳು ಶ್ರೀಗಳು, ಪೇಜಾವರ ಶ್ರೀಗಳು, ರಂಭಾಪುರಿ ಶ್ರೀಗಳು ಹಾಗೂ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸೇರಿದಂತೆ ಮಠಾಧೀಶರು, ಚರ್ಚ್‌ನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಮತ್ತು ಮೌಲ್ವಿಗಳು ಸೇರಿದಂತೆ ಒಟ್ಟು 55 ಸರ್ವಧರ್ಮದ ಪ್ರಮುಖ ಗುರುಗಳಿಗೆ ಆಹ್ವಾನ ನೀಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಆಡಳಿತವಿರುವ ಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಗಣ್ಯರಿಗಾಗಿ ಲೋಕಭವನದಲ್ಲಿ 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 3 ಹಂತದ ಪ್ರತ್ಯೇಕ ಪಾಸ್ ವಿತರಿಸಲಾಗಿದೆ. ವಸಂತನಗರದ ಶಾಂಗ್ರೀಲಾ ಹೋಟೆಲ್ ಹಾಗೂ ಕೆಪಿಸಿಸಿ ಕಚೇರಿಯ 1 ಕಿ.ಮೀ ವ್ಯಾಪ್ತಿಯಲ್ಲಿ ‘ನೋ-ಫ್ಲೈ ಝೋನ್’ ಘೋಷಿಸಲಾಗಿದೆ.


