ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಬದ್ಧನಾಗಿದ್ದೇನೆ, ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಆಶೋತ್ತರಗಳನ್ನು ಈಡೇರಿಸುತ್ತೇನೆ. ದಾರಿ ಅಷ್ಟು ಸುಲಭವಾಗಿಲ್ಲ. ಆದರೂ ನಿರ್ವಹಿಸಬೇಕು. ನನ್ನ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ, ಸಮರ್ಪಣಾಭಾವದಿಂದ ಮಾಡುತ್ತೇನೆ ಎಂದು ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಕೆಲಸಗಳ ಮೂಲಕ ನಾನು ಏನು ಎಂಬುದನ್ನು ಮರುನಿರೂಪಿಸಬೇಕಿದೆ. ಜಗತ್ತು ಬೆಂಗಳೂರು ಮತ್ತು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತದೆ. ನಾನು ಯಾರನ್ನು ಭೇಟಿಯಾದರೂ ಅವರು ಕರ್ನಾಟಕ ದೇಶದ ಪ್ರಮುಖ ರಾಜ್ಯ ಎಂದು ಹೇಳುತ್ತಾರೆ. ಆದ್ದರಿಂದ ಜವಾಬ್ದಾರಿ ಹೆಚ್ಚಿದೆ ಎಂದರು.
ಕರ್ನಾಟಕದ ಜನರು ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆಯನ್ನು ಸೇರಿ ನಾನು ಸಮಾಜದ ಪ್ರತಿಯೊಂದು ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಕರ್ನಾಟಕದಲ್ಲಿ ಹೊಸ ಯುವ ಯುಗ ಪ್ರಾರಂಭವಾಗಲಿದೆ ಎಂದು ಹೇಳಿದರು.
ನಾನು ಯಾವುದನ್ನೂ ಕನಸು ಎಂದು ಹೇಳುವುದಿಲ್ಲ. ಕಠಿಣ ಪರಿಶ್ರಮದ ಜೊತೆಗೆ ಸಮರ್ಪಣೆ ಎಂದು ಕರೆಯುತ್ತೇನೆ. ಇದು ಕಠಿಣ ಸಮಯ, ವಿಳಂಬವಾಗಿರಬಹುದು ಆದರೆ ನಿರಾಕರಣೆಗೆ ಒಳಗಾಗಿಲ್ಲ. ಶಿವಕುಮಾರ್ ಒಬ್ಬನ ವಿಚಾರವಲ್ಲ, ಕಾಂಗ್ರೆಸ್ ಪಕ್ಷದ ಇತಿಹಾಸದೊಂದಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮದ ಫಲವಾಗಿದೆ ಎಂದರು.
ಗಾಂಧಿ ಕುಟುಂಬ ನನ್ನ ಮೇಲೆ ನಂಬಿಕೆಯಿಟಟ್ಟು ಅವಕಾಶಗಳನ್ನು ನೀಡಿದರು. ರಾಜೀವ್ ಗಾಂಧಿ ಅವರಿಂದ ಹಿಡಿದು ಇಲ್ಲಿಯವರೆಗೆ ಕುಟುಂಬಕ್ಕೆ ತುಂಬಾ ನಿಷ್ಠನಾಗಿದ್ದೇನೆ. ನೆಹರು ಕುಟುಂಬದ ಸದಸ್ಯರು ತಮಗೆ ಸಿಕ್ಕ ವಿವಿಧ ಸ್ಥಾನಗಳನ್ನು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರೂ ಉನ್ನತ ಸ್ಥಾನ ತ್ಯಾಗ ಮಾಡಿದರು. ಅವರು ಪ್ರಧಾನಿಯಾಗಬಹುದಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಬದಲಾಗಿ ದೇಶಕ್ಕಾಗಿ ಹೋರಾಡಿದರು. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮೂಲಕ ಈ ದೇಶದ ಬೀದಿಗಳಲ್ಲಿ ಓಡಾಡಿದರು. ಯಾವ ನಾಯಕ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ, ಇಷ್ಟು ಕಷ್ಟದ ಕೆಲಸ ಮಾಡುತ್ತಿದ್ದಾನೆ ಹೇಳಿ ಎಂದರು.
ಸಚಿವರ ಆಯ್ಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಹೆಸರುಗಳು ಅಧಿಕೃತವಲ್ಲ. ಹೈಕಮಾಂಡ್ ನಾಯಕರು ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಸದಾಶಿವನಗರ ನಿವಾಸದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಚಿವರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದು, ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ. ದೆಹಲಿ ನಾಯಕರು ನಮಗೆ ಪಟ್ಟಿ ರವಾನೆ ಮಾಡಿದ ಬಳಿಕ, ನಾವು ಅದನ್ನು ರಾಜಭವನಕ್ಕೆ ಕಳುಹಿಸಿಕೊಡುತ್ತೇವೆ ಎಂದರು.
ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬೇರೊಂದು ದಿನ ನಡೆಸಲು ತೀರ್ಮಾನಿಸಿದ್ದೇವೆ. ಆಹ್ವಾನ ಪತ್ರಿಕೆ ಪಡೆದಿರುವ ಬ್ಲಾಕ್, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯವರು ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನಕ್ಕೆ ಆಗಮಿಸಬೇಕು. ನಾನು ಸಚಿವ ಸಂಪುಟ ಸಭೆ ಮಾಡಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೀಳ್ಕೊಟ್ಟು ನಂತರ ಭಾರತ ಜೋಡೋ ಭವನದಲ್ಲಿ ಭೇಟಿ ಮಾಡುವೆ ಎಂದು ಮಾಹಿತಿ ನೀಡಿದರು.


