Menu

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ತಡೆ

ಕರ್ನಾಟಕದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಕೇಂದ್ರ ಗೃಹ ಸಚಿವಾಲಯವು ತಡೆ ನೀಡಿದೆ. ಈಗಿರುವ ಕಾನೂನು ವ್ಯವಸ್ಥೆ ಸಮರ್ಪಕವಾಗಿದೆ. ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಕಳೆದ ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿದೆ. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.

ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು ಎಂದು ಹೇಳಿದೆ.

2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಸ್ಪೀಕರ್ ಯು.ಟಿ. ಖಾದರ್​​ ಹೆಚ್ಚಿನ ಚರ್ಚೆಗೆ ಒಪ್ಪದ ಕಾರಣ ಪ್ರತಿಪಕ್ಷ ಬಿಜೆಪಿ ಸಭಾ ತ್ಯಾಗ ಮಾಡಿತ್ತು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಮಸೂದೆ ಅನುಮೋದಿಸಲು ನಿರಾಕರಿಸಿ ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.

Related Posts

Leave a Reply

Your email address will not be published. Required fields are marked *