“ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು. ಜನರಿಗೆ ಸರಿಯಾದ ದಾಖಲೆ ಒದಗಿಸಿಕೊಟ್ಟು ಅವರ ಮತ ಕಾಪಾಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಹೊರವಲಯ ದೇವನಹಳ್ಳಿ ಬಳಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಇದು ಮ್ಯಾಪಿಂಗ್ ಪ್ರಕ್ರಿಯೆ ಎಂಬುದನ್ನು ಎಲ್ಲರೂ ತಲೆಯಿಂದ ತೆಗೆದುಹಾಕಿ. ಬಿಎಲ್ಓಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ಕಡ್ಡಾಯವಾಗಿ ತುಂಬಿ ದಾಖಲೆ ಸಮೇತ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಇದಕ್ಕಾಗಿ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಬಿಎಲ್ಓಗಳು ಪಕ್ಷಬೇಧ ಮರೆತು ಸರಿಯಾದ ರೀತಿಯಲ್ಲಿ ಎಲ್ಲರ ಮತದಾನದ ಹಕ್ಕನ್ನು ರಕ್ಷಣೆ ಮಾಡಲು ಸಹಕಾರ ನೀಡಬೇಕು” ಎಂದು ಕರೆ ನೀಡಿದರು.
“ಸಚಿವರು, ಶಾಸಕರು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಈ ಕೆಲಸದ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದ್ದೇವೆ. ಇಂದಿನ ಸಭೆಗೆ ಗೈರಾಗಿರುವ ಪದಾಧಿಕಾರಿಗಳನ್ನು ಅವರ ಸ್ಥಾನದಿಂದ ತೆಗೆಯಲು ಪಕ್ಷದಿಂದ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ, ಯಾರು ಇಂದಿನ ಸಭೆಗೆ ಬಂದಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಸಂಘಟನೆಯಲ್ಲಿ ಆಸಕ್ತಿ ತೋರದವರನ್ನು ಅವರ ಸ್ಥಾನಮಾನದಿಂದ ತೆಗೆದು ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಎಸ್ಐಆರ್ ವಿರುದ್ಧ ಪ್ರತಿಭಟನೆ ಮಾಡುತ್ತೀರಾ ಎಂದು ಕೇಳಿದಾಗ, “ಎಸ್ಐಆರ್ ವಿರುದ್ಧ ಪ್ರತಿಭಟನೆಗಿಂತ, ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.


