“ಅಮಿತ್ ಶಾ ಬಿಜೆಪಿಗೆ 122 ಸೀಟು ಬರುತ್ತದೆ, ಎಲ್ಲರೂ ಸೂಟುಬೂಟು ಸಿದ್ಧಮಾಡಿಕೊಳ್ಳಿ ಎಂದಿದ್ದರು. ನಾನು ನಮಗೆ 136 ಸೀಟು ಬರಲಿದೆ ಎಂದು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ ಬರೆದುಕೊಳ್ಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ” ಎಂದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
2028ಕ್ಕೆ ನಮ್ಮ ಸರ್ಕಾರ ಬರುವ ಕನಸು ಕಾಣಬೇಡಿ ಕೆಲಸ ಮಾಡಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬಿನ್ ಅವರು ರಾಜ್ಯ ನಾಯಕರಿಗೆ ಸೂಚನೆ ನೀಡಿರುವ ಬಗ್ಗೆ ಕೇಳಿದಾಗ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಮಾತನಾಡಿದರು.
ನೀವು ದೆಹಲಿ ಪ್ರವಾಸ ಮಾಡುತ್ತೀರಾ ಎಂದು ಕೇಳಿದಾಗ, “ನಮ್ಮನ್ನು ಕರೆದರೆ ಹೋಗುತ್ತೇವೆ. ಸುರ್ಜೆವಾಲ ಅವರು ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ದೆಹಲಿಗೆ ಬನ್ನಿ ಎಂದರೆ ನಾನು ಹೋಗುತ್ತೇನೆ. ಇಲ್ಲವಾದರೆ ಇಲ್ಲೇ ಉಳಿಯುತ್ತೇನೆ. ಪಕ್ಷ ಕರೆದಾಗ ನಾವು ಹೋಗಲೇಬೇಕಾಗುತ್ತದೆ” ಎಂದು ಉತ್ತರಿಸಿದರು. ಸಿಎಂ ಸ್ಥಾನ ವಿಚಾರವಾಗಿ ಚರ್ಚೆ ನಡೆಯುವುದೇ ಎಂದು ಕೇಳಿದಾಗ, “ನನಗೆ ಅದರ ಬಗ್ಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಆರ್ಥಿಕ ಹೊರೆ ಇಳಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಇಲ್ಲವಾಗಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಆಲೋಚನೆ ಮಾಡಿ ಎಂದರು.
“ನಮ್ಮ ಗ್ಯಾರಂಟಿ ಇಡೀ ದೇಶವೇ ಮೆಚ್ಚಿದೆ. ವಿಶ್ವಸಂಸ್ಥೆಯೇ ಪ್ರಶಂಸೆ ನೀಡಿದೆ. ಬೆಲೆ ಏರಿಕೆ ಗಗನಕ್ಕೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಅನೇಕ ಹೊಟೇಲ್ ಗಳು ಸಿಲಿಂಡರ್ ದರ ಏರಿಕೆ ಹಾಗೂ ಅಭಾವದಿಂದ ಅರ್ಧ ಬಂದ್ ಮಾಡಿದ್ದಾರೆ. ಈ ವರ್ಷ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮಾರ್ಚ್ 1ರಂದು ₹28, ಮಾರ್ಚ್ 7ರಂದು ₹114.50, ಮಾರ್ಚ್ 23ರಂದು ₹49, ಏಪ್ರಿಲ್ 1ರಂದು ₹195 ರಿಂದ ₹218 ರವರೆಗೆ, ಮೇ 1ರಂದು ₹993 ನಷ್ಟು ಏರಿಕೆ ಮಾಡಿದ್ದಾರೆ” ಎಂದು ವಿವರಿಸಿದರು.
“ಬೆಲೆ ಏರಿಕೆ ಎಲ್ಲರ ಬದುಕಿಗೆ ಶಾಪವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕಡಿಮೆ ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಇಂಧನ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರ ನಿತ್ಯ 1 ಸಾವಿರ ಕೋಟಿ ಸಂಗ್ರಹಿಸುತ್ತಿದೆ. ಯಾವುದೇ ದೇಶದಲ್ಲಿ ಈ ರೀತಿ ಬೆಲೆ ಏರಿಕೆಯಾಗಿಲ್ಲ. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 7.52 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ” ಎಂದು ತಿಳಿಸಿದರು.
“ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಸುಲಿಗೆ ಎಂದು ಟೀಕೆ ಮಾಡಿದೆವು, 100 ನಾಟೌಟ್ ಎಂದು ಪ್ರತಿಭಟನೆ ಮಾಡಿದೆವು. ನಿಘಂಟಿನಲ್ಲಿರುವ ಎಲ್ಲಾ ಪದ ಪ್ರಯೋಗ ಮಾಡಿ ಟೀಕೆ ಮಾಡಿದರೂ ಮಾನ ಮರ್ಯಾದೆ ಇಲ್ಲದೆ, ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳುತ್ತಿದ್ದಾರೆ. ಮೊದಲು ನೀವು ಕೇಂದ್ರ ಸರ್ಕಾರದ ಸುಲಿಗೆ ನಿಲ್ಲಿಸಿ” ಎಂದು ವಾಗ್ದಾಳಿ ನಡೆಸಿದರು.
“ ಪ್ರಧಾನಮಂತ್ರಿ ಅಡುಗೆ ಎಣ್ಣೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ. ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ಇಂಧನ ತೈಲಗಳ ಮೇಲಿನ ತೆರಿಗೆ ಮೂಲಕ 43 ಲಕ್ಷ ಕೋಟಿ ಸಂಗ್ರಹಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 71 ರೂ. ಇದ್ದ ಪೆಟ್ರೋಲ್ ಹಾಗೂ 56 ರೂ. ಇದ್ದ ಡೀಸೆಲ್ ಬೆಲೆ ಇಂದು ಕ್ರಮವಾಗಿ 110 ಹಾಗೂ 99 ರೂ. ತಲುಪಿದೆ. ಇದೇ ತಿಂಗಳು 30ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
“ಬೆಲೆ ಏರಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರೇ ಈ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು. ಮೋದಿ ಮದುವೆಗೆ ಚಿನ್ನ ಖರೀದಿ ಮಾಡಬೇಡಿ, ಸರಿಯಾಗಿ ಊಟ ಮಾಡಬೇಡಿ ಎಂದು ಹೇಳಿ ಜನರನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಒಂದು ದಿನ ಮೆಟ್ರೋದಲ್ಲಿ ಸಂಚರಿಸಿದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಅಧಿಕಾರಿಗಳು ಈಗ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರಾ? ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಒಂದು ದಿನ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಇದು ವಾಸ್ತವವಾಗಿ ಜಾರಿ ಮಾಡಲು ಆಗದ ಕೆಲಸ ಎಂದು ಹರಿಹಾಯ್ದರು.
ಹಣದುಬ್ಬರದ ನಡುವೆ ನೀವು ಗ್ಯಾರಂಟಿ ಯೋಜನೆ ನೀಡುತ್ತಿದ್ದೀರಿ ಎಂದು ಕೇಳಿದಾಗ “ಬಿಜೆಪಿಯವರು ಜಾತಿ, ಧರ್ಮದ ವಿಚಾರವಾಗಿ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಜನರ ಬೆವರು, ಪರಿಶ್ರಮಕ್ಕೆ ಬೆಲೆ ನೀಡಿ ಅವರ ಹೊಟ್ಟೆ ತುಂಬಿಸುವ ಕಾರ್ಯಕ್ರಮಗಳ ಮೂಲಕ ರಾಜಕೀಯ ಮಾಡುತ್ತೇವೆ. ಇದು ನಮ್ಮ ಚಿಂತನೆ” ಎಂದು ಪ್ರತಿಕ್ರಿಯಿಸಿದರು.
ಗ್ಯಾರಂಟಿ ಪರಿಷ್ಕರಣೆ ಮಾಡಲಾಗುವುದೇ ಎಂದು ಕೇಳಿದಾಗ, “ಕೆಲವು ಗ್ಯಾರಂಟಿ ಫಲಾನುಭವಿಗಳು ಮೃತಪಟ್ಟಿದ್ದು, 100 ಕೋಟಿಯಷ್ಟು ದುರ್ಬಳಕೆಯಾಗಿದೆ. ಇನ್ನು ಬೇರೆಯವರ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದಯೇ ಇಲ್ಲವೇ ಎಂದು ತಿಳಿಯಬೇಕಿದೆ. ಹೀಗಾಗಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಚರ್ಚೆ ಮಾಡುವ ಬಗ್ಗೆ ಸಲಹೆ ಬಂದಿದೆ. ಪ್ರತಿ ತಾಲೂಕಿನಲ್ಲಿ ಇದನ್ನು ಪರಿಶೀಲನೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
2 ತಿಂಗಳಿನಿಂದ ಅನ್ನಭಾಗ್ಯ ಅಕ್ಕಿ ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, “ಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ನಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.


