ಮೇ 30 ಮತ್ತು 31ರಂದು ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಲು ಅನರ್ಹರೆಂದು ಪರಿಗಣಿಸುತ್ತಿರುವುದಕ್ಕೆ ಭಾರತೀಯ ಕುಸ್ತಿ ಒಕ್ಕೂಟವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಟ್ರಯಲ್ಸ್ನಲ್ಲಿ ಫೋಗಟ್ ಭಾಗವಹಿಸುವುದನ್ನು ಖಚಿತಪಡಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ತಾಯ್ತನವನ್ನು ಗೌರವಿಸಿ ಎಂದಿರುವ ಹೈಕೋರ್ಟ್, ತಾಯ್ತನ ದೇಶಕ್ಕೆ ಹೆಮ್ಮೆ. ಅದು ಕ್ರೀಡಾಪಟುವಿಗೆ ಮಾರಕವಾಗಬಾರದು. ಕ್ರೀಡಾ ಸಂಘಟನೆಯ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ದೇಶದ ಕ್ರೀಡಾಪಟುಗಳ ವೃತ್ತಿಜೀವನಕ್ಕೆ ಧಕ್ಕೆಯಾಗಬಾರದು. ವಿನೇಶ್ ಜುಲೈ 2025 ರಲ್ಲಿ ತಾಯಿಯಾಗಿದ್ದು, ಕೆಲವೇ ತಿಂಗಳುಗಳಲ್ಲಿ ದೇಶಕ್ಕಾಗಿ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಕ್ರೀಡೆಯಿಂದ ದೂರ ಇಡುವುದು ಸರಿಯಲ್ಲ ಮತ್ತು ಫೆಡರೇಶನ್ ಕ್ರೀಡೆಯ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಚಾಟಿ ಬೀಸಿದೆ.
ವಿನೇಶ್ ಅವರನ್ನು ‘ಅನರ್ಹ’ ಎಂದು ಘೋಷಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ನಿರ್ದೇಶನ ನೀಡಿದೆ. ಹಳೆಯ ಆಯ್ಕೆ ಮಾನದಂಡಗಳನ್ನು ಏಕಾಏಕಿ ಬದಲಾಯಿಸಿರುವುದರ ಹಿಂದೆ ದ್ವೇಷದ ರಾಜಕಾರಣ ಇದೆ ಎಂಬಂತೆ ಭಾಸವಾಗುತ್ತಿರುವುದಾಗಿ ಹೇಳಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡಿದ್ದನ್ನು ಫೆಡರೇಶನ್ ತನ್ನ ನೋಟಿಸ್ನಲ್ಲಿ “ರಾಷ್ಟ್ರೀಯ ಅವಮಾನ” ಎಂದು ಕರೆದಿರುವುದಕ್ಕೆ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.


