Menu

ದಾವಣಗೆರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ: ಅತ್ಯಾಚಾರಿ ಅರೆಸ್ಟ್‌

ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೋಗಳೆರಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಂಜಣ್ಣ (30) ಬಂಧಿತ ಆರೋಪಿ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ದಾವಣಗೆರೆ ಜಿಲ್ಲಾ ಜೈಲಿಗೆ ಕಳಿಸಲಾಗಿದೆ.  ಕೆಲವು ತಿಂಗಳುಗಳಿಂದ ಬಾಲಕಿ ಕೈ-ಕಾಲು ಬಾವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಪೋಷಕರು ಮಾತ್ರ ಮಗಳಿಗೆ ದೆವ್ವ, ಭೂತದ ಗಾಳಿ ಸೋಕಿದೆ ಎಂದು ಭಾವಿಸಿ ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿ ಬಳಿಯ ಬೋಸದೇವರಹಟ್ಟಿ ದೇವಾಲಯಗಳಿಗೆ ಕರೆದೊಯ್ದು ಪೂಜೆ ಹರಕೆ ಮಾಡಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ದೇವಸ್ಥಾನದವರ ಸೂಚನೆಯಂತೆ ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಬಂದಾಗ ಬಾಲಕಿಗೆಹೆರಿಗೆ ನೋವು ಕಾಣಿಸಿಕೊಂಡಿದೆ. ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆರೋಗ್ಯ ತಪಾಸಣೆ ನಡೆಸಿದಾಗ ಆಕೆ ಒಂಬತ್ತು ತಿಂಗಳ ಗರ್ಭಿಣಿ ಎಂದು ವೈದ್ಯರು ತಿಳಿದ್ದಾರೆ. ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ಮಧ್ಯಾಹ್ನ ಬಾಲಕಿಗೆ ಗಂಡು ಮಗು ಜನಿಸಿದೆ.

ಪೋಷಕರು ವಿಚಾರಿಸಿದಾಗ ಹೊಲಕ್ಕೆ ಟ್ರ್ಯಾಕ್ಟರ್ ಉಳುಮೆ ಮಾಡಲು ಬರುತ್ತಿದ್ದ ಮಂಜಣ್ಣ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಯಲಾಗಿದೆ. ಮೊಬೈಲ್‌ನಲ್ಲಿ ಬಾಲಕಿ ಜೊತೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ ಆತ ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ. ಅದಕ್ಕೆ ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದಾಗಿ ಬಾಲಕಿ ತಿಳಿಸಿದ್ದಾಳೆ.

ಸಂತ್ರಸ್ತೆಯ ತಂದೆ ನೀಡಿದ ದೂರು ಆಧರಿಸಿ ಜಗಳೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮಂಜಣ್ಣನನ್ನು ಬಂಧಿಸಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

Related Posts

Leave a Reply

Your email address will not be published. Required fields are marked *