ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಏಕಾಏಕಿ ಆರಂಭಗೊಂಡ ಗುಡುಗು ಸಿಡಿಲಿನ ಅಬ್ಬರಕ್ಕೆ ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ (56) ಮೃತಪಟ್ಟವರು. ಅವರು ಭಾನುವಾರ ರಾತ್ರಿ ನಾಗರಾಜಪ್ಪ ಮನೆಯ ಮುಂದೆ ನಿಂತಿದ್ದಾಗ ಅಬ್ಬರಿಸಿದ ಸಿಡಿಲಿನ ಶಬ್ದಕ್ಕೆ ಬೆಚ್ಚಿ ಹೃದಯಾಘಾತವಾಗಿ ಸ್ಥಳದಲ್ಲೇ ಅಸು ನೀಗಿದ್ದಾರೆ.
ರಾಜ್ಯದ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಸಮಯ ಕಾಲ ಧಾರಾಕಾರ ಮಳೆ ಸುರಿದಿದೆ. ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿದ್ದು, ದ್ವಿಚಕ್ರ ವಾಹನ, ಕಾರು ಸೇರಿ ಮನೆಯ ಗೋಡೆಗಳು ಹಾನಿಗೊಂಡಿವೆ. ಹವಾಮಾನ ಇಲಾಖೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಜಿಲ್ಲಾಡಳಿತ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
ಹಾವೇರಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ತೆಂಗಿನಮರ ಮತ್ತು ಅಡಿಕೆ ಮರಗಳು ಸಂಪೂರ್ಣ ನಾಶವಾಗಿವೆ. ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಮತ್ತು ಬಡಸಂಗಾಪುರ ಗ್ರಾಮದಲ್ಲಿ ಹೆಚ್ಚಿನ ಹಾನಿಯಾಗಿದೆ. ಐದು ಲಕ್ಷಕ್ಕೂ ಅಧಿಕ ಮೌಲ್ಯದ ಮರಗಳು ನಾಶವಾಗಿವೆ.. ಸರ್ಕಾರ ಸೂಕ್ತವಾದ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ರಾಣೇಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಕೋಳಿ ಫಾರ್ಮ್ ಸಂಪೂರ್ಣ ನಾಶವಾಗಿದೆ. ಸವಣೂರು ತಾಲೂಕಿನ ಸೇವಾಲಾಲ್ ಪುರ ಗ್ರಾಮದ ವೀಳ್ಯದೆಲೆ ತೋಟ ಹಾನಿಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಮೃತಪಟ್ಟಿವೆ. ಈ ಘಟನೆಯಿಂದ ಪಶುಸಂಗೋಪನೆಗೆ ಅವಲಂಬಿತವಾಗಿದ್ದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿಯೂ ಹಾರಿ ಹೋಗಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಿನ ಗಾಳಿ ಹಾಗೂ ಮಳೆಯಾಗುವ ಸೂಚನೆ ಇದೆ. ಕರಾವಳಿ ಭಾಗದ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಗುಡುಗು ಹಾಗೂ ತೀವ್ರ ಗಾಳಿ ಬೀಸುವ ಸಾಧ್ಯತೆ ಇದೆ. ಜೇವರ್ಗಿ ತಾಲೂಕಿನಲ್ಲಿ ಮಳೆ ಮತ್ತು ಬಿರುಗಾಳಿಗೆ ತಾಲೂಕು ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಕುಸಿದಿದೆ. ನೆಲಸಮಗೊಂಡಿದೆ. ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿ ಶಾದಿ ಮಹಲ್‌ನ ಛಾವಣಿ ಹಾಗೂ ಟೆಂಟ್ ಕುಸಿತಗೊಂಡಿದೆ. ಮರ ಧರೆಗುರುಳಿದ್ದು, ಸಂಚಾರಕ್ಕೆ ತೊಡಕಾಗಿದೆ.
ಮಳೆಗೆ ಹುಬ್ಬಳ್ಳಿ ತುಳಜಾ ಭವಾನಿ ರಸ್ತೆ ಕೆರೆಯಂತಾಗಿದೆ. ಚರಂಡಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಹಲವೆಡೆ ಮರಗಳು ಉರುಳಿ ಬಿದ್ದಿವೆ. ದರ್ಗಾ, ಮನೆಗಳು, ವಾಹನಗಳಿಗೆ ಹಾನಿಯಾಗಿದೆ. ತೆಂಗಿನ ಮರಕ್ಕೆ ಸಿಡಿಲು ಅಪ್ಪಳಿಸಿ ತೆಂಗಿನ ಮರ ಉರಿದು ಹೋಗಿದೆ.


